ಕಣ್ಣು, ಮನುಷ್ಯನ ದೇಹದ ಸೂಕ್ಷ್ಮ ಹಾಗೂ ಸುಂದರ ಭಾಗವಾಗಿದೆ. ಕಣ್ಣಿನ ಸೌಂದರ್ಯದ ಜೊತೆ ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು. ಕಣ್ಣಿಲ್ಲದೆ ಜೀವನ ನಡೆಸುವುದು ಸವಾಲಿನ ಕೆಲಸ. ಇರುವ ಆರೋಗ್ಯಕರ ಕಣ್ಣನ್ನು ಸರಿಯಾಗಿ ನೋಡಿಕೊಂಡಲ್ಲಿ ಸಮಸ್ಯೆ ಎದುರಾಗುವುದಿಲ್ಲ. ದೃಷ್ಟಿ ಸ್ಪಷ್ಟವಾಗಿರಬೇಕು ಹಾಗೂ ಕಣ್ಣಿಗೆ ಯಾವುದೇ ಹಾನಿಯಾಗಬಾರದೆಂದರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನಮ್ಮ ಕೆಲ ಅಭ್ಯಾಸಗಳೇ ನಮ್ಮ ಕಣ್ಣಿನ ಆರೋಗ್ಯವನ್ನು ಹಾಳು ಮಾಡುತ್ತವೆ.
ಅನೇಕರು ಆಗಾಗ ಕಣ್ಣುಗಳನ್ನು ಉಜ್ಜುತ್ತಿರುತ್ತಾರೆ. ಇದು ಕಣ್ಣಿಗೆ ಹಾನಿಯುಂಟು ಮಾಡುತ್ತದೆ. ಕಣ್ಣುಗಳ ಸುತ್ತ ಇರುವ ರಕ್ತನಾಳಗಳು ತುಂಬಾ ಸೂಕ್ಷ್ಮವಾಗಿರುತ್ತವೆ. ಕಣ್ಣುಗಳನ್ನು ಉಜ್ಜುವುದರಿಂದ ಇದಕ್ಕೆ ಹಾನಿಯಾಗುತ್ತದೆ. ಕಣ್ಣು ಊದಿಕೊಳ್ಳಲು ಕಾರಣವಾಗಬಹುದು. ಜೊತೆಗೆ ಕಣ್ಣಿನ ಸುತ್ತ ಕಪ್ಪು ಕಲೆ ಕಾಣಿಸಬಹುದು. ಹಾಗಾಗಿ ಈ ಅಭ್ಯಾಸವಿದ್ರೆ ಇಂದಿನಿಂದ್ಲೇ ಇದನ್ನು ಬಿಟ್ಟುಬಿಡಿ.
ಸಾಮಾನ್ಯವಾಗಿ ಜನರು ಬಿಸಿಲಿನಲ್ಲಿ ಸನ್ ಗ್ಲಾಸ್ ಧರಿಸುವವರನ್ನು ಸ್ಟೈಲ್ ಎಂದುಕೊಂಡಿದ್ದಾರೆ. ಗ್ಲಾಸ್ ಧರಿಸದಿರುವುದು ಸರಳ ಜೀವನದ ಸಂಕೇತ ಎಂದುಕೊಂಡಿದ್ದಾರೆ. ಇದು ತಪ್ಪು. ಕಣ್ಣಿನ ರಕ್ಷಣೆಗೆ ಸನ್ ಗ್ಲಾಸ್ ಧರಿಸುವುದು ಒಳ್ಳೆಯದು. ಸೂರ್ಯನ ಹಾನಿಕಾರಕ ಕಿರಣಗಳು ಕಣ್ಣು ಮತ್ತು ಕಣ್ಣುರೆಪ್ಪೆ ಎರಡನ್ನೂ ಹಾನಿ ಮಾಡುತ್ತವೆ.
ಸಂಶೋಧನೆಯ ಪ್ರಕಾರ, ಕಣ್ಣಿನ ಪೊರೆ, ಒಣ ಕಣ್ಣುಗಳು, ಡಯಾಬಿಟಿಕ್ ರೆಟಿನೋಪತಿಯಂತಹ ಸಮಸ್ಯೆಗಳ ಹಿಂದೆ ಧೂಮಪಾನ ಪ್ರಮುಖ ಕಾರಣವಾಗಿದೆ. ಧೂಮಪಾನ, ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಯನ್ನು ನಾಲ್ಕು ಪಟ್ಟು ಹೆಚ್ಚು ಮಾಡುತ್ತದೆ.
ಕಣ್ಣುಗಳನ್ನು ಆರೋಗ್ಯವಾಗಿಡಲು ವಿವಿಧ ವಿಟಮಿನ್ ಗಳು, ಖನಿಜಗಳು, ಕೊಬ್ಬಿನಾಮ್ಲಗಳು ಇತ್ಯಾದಿಗಳು ಬೇಕಾಗುತ್ತವೆ. ಹಣ್ಣುಗಳು, ಹಸಿರು ಎಲೆಗಳ ತರಕಾರಿಗಳು, ಮೀನು ಇತ್ಯಾದಿಗಳನ್ನು ಸೇವಿಸಬೇಕು.
ಕಣ್ಣಿನ ರಕ್ಷಣೆಗೆ ನಿದ್ರೆ ಅಗತ್ಯ. ಕಣ್ಣಿನ ಸ್ನಾಯುಗಳಿಗೆ ವಿಶ್ರಾಂತಿ ಅಗತ್ಯವಿರುತ್ತದೆ. ಆರಾಮದಾಯಕ ನಿದ್ರೆ ಕಣ್ಣಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ನಿದ್ರೆ ಸರಿಯಾಗಿ ಆಗದೆ ಹೋದಲ್ಲಿ, ಕಪ್ಪು ಕಲೆ, ಕೆಂಪು ಕಣ್ಣು, ಕಣ್ಣಿನ ಶುಷ್ಕತೆ ಸಮಸ್ಯೆ ಕಾಡುತ್ತದೆ.
ಕಡಿಮೆ ನೀರು ಕುಡಿಯುವುದು ಕೂಡ ಕಣ್ಣಿನ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ದಿನಕ್ಕೆ ಅಗತ್ಯವಾಗಿ 3-4 ಲೀಟರ್ ನೀರಿನ ಸೇವನೆ ಮಾಡಬೇಕು.