ಹಸಿಯದಿರೆ ಉಣಬೇಡ ಹಸಿದೂ ಮತ್ತಿರಬೇಡ ಎಂದು ಹಿರಿಯರು ಹೇಳುವುದನ್ನು ಸಾಮಾನ್ಯವಾಗಿ ಕೇಳಿರುತ್ತೀರಿ. ಆದರೆ, ಇಂದಿನ ಒತ್ತಡದ ಜೀವನ, ಜಂಜಾಟಗಳಿಂದ ಸಮಯಕ್ಕೆ ಸರಿಯಾಗಿ ಊಟ ಮಾಡಲು ಹೆಚ್ಚಿನವರಿಗೆ ಸಾಧ್ಯವಾಗುವುದಿಲ್ಲ.
ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿದೆ. ಊಟದ ಬಗ್ಗೆ ಹೆಚ್ಚಿನ ನಿಗಾ ವಹಿಸಿದರೆ, ಆರೋಗ್ಯಕ್ಕೂ ಒಳ್ಳೆಯದು.
ತಿಂಡಿ ಮತ್ತು ಊಟದ ನಡುವೆ 4 ಗಂಟೆಗಳ ಅಂತರವಿದ್ದರೆ ಉತ್ತಮ. ಬೆಳಿಗ್ಗೆ ಮನೆಯಿಂದ ಹೊರಡುವಾಗ ಸರಿಯಾದ ಸಮಯಕ್ಕೆ ತಿಂಡಿಯನ್ನು ತಿಂದರೂ, ಊಟವನ್ನು ಮಾತ್ರ ಬಿಡುವಾದಾಗಲೇ ಅನೇಕರು ಮಾಡುತ್ತಾರೆ.
ಹಿಡಿದ ಕೆಲಸವನ್ನು ಮುಗಿಸುವ ಧಾವಂತದಲ್ಲಿ ಹೆಚ್ಚಿನವರು ಊಟದ ಮೇಲೆ ಗಮನವನ್ನೇ ಹರಿಸುವುದಿಲ್ಲ. ಸಮಯಕ್ಕೆ ಸರಿಯಾಗಿ ಊಟ ಮಾಡದೇ ಟೀ ಕುಡಿಯುತ್ತಾರೆ. ಆದರೆ, ಹಸಿದ ಹೊಟ್ಟೆಯಲ್ಲಿ ಹೆಚ್ಚು ಟೀ ಕುಡಿಯುವುದು ಒಳ್ಳೆಯದಲ್ಲ ಎನ್ನುತ್ತಾರೆ ತಿಳಿದವರು.
ಊಟವನ್ನು ಹಸಿವಾಗದೇ ಮಾಡಬಾರದು, ಹಸಿವಾದ ಬಳಿಕ ಬಹಳ ಹೊತ್ತು ತಡೆದುಕೊಳ್ಳಬಾರದು. ನಿಮ್ಮ ಕೆಲಸದ ಒತ್ತಡದ ನಡುವೆಯೂ ಒಂದಿಷ್ಟು ಬಿಡುವು ಮಾಡಿಕೊಂಡು ಊಟವನ್ನು ಮಾಡಿ.
ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಸೇವಿಸುವುದರಿಂದ ಜೀರ್ಣಕ್ರಿಯೆ ಸರಿಯಾಗಿ ಆಗುತ್ತದೆ. ಇಲ್ಲವಾದರೆ ಅಜೀರ್ಣವಾಗುತ್ತದೆ. ಅಜೀರ್ಣದಿಂದ ಅನೇಕ ವ್ಯಾಧಿಗಳು ಬರುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಊಟದ ಬಗ್ಗೆ ನಿಮಗಿರಲಿ ಗಮನ.