ನೀರು ನಮ್ಮ ದೇಹಕ್ಕೆ ಬಹಳ ಮುಖ್ಯ. ಕಡಿಮೆ ನೀರು ಕುಡಿಯುವ ಜನರು ಅಕಾಲಿಕವಾಗಿ ವೃದ್ಧಾಪ್ಯವನ್ನು ಎದುರಿಸುತ್ತಾರೆ ಎಂಬುದು ಇತ್ತೀಚಿನ ಅಧ್ಯಯನವೊಂದರಲ್ಲಿ ದೃಢಪಟ್ಟಿದೆ. ಅಷ್ಟೇ ಅಲ್ಲ ಅಗತ್ಯಕ್ಕಿಂತ ಕಡಿಮೆ ನೀರು ಕುಡಿಯುವ ಅಭ್ಯಾಸ ಅಕಾಲಿಕ ಸಾವಿಗೂ ಕಾರಣವಾಗಬಹುದು.
‘ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್’ನ ಹೊಸ ಸಂಶೋಧನೆಯಲ್ಲಿ ಈ ಆಘಾತಕಾರಿ ಅಂಗತಿ ಬಹಿರಂಗವಾಗಿದೆ. ತಮ್ಮನ್ನು ತಾವು ಹೈಡ್ರೇಟ್ ಆಗಿಟ್ಟುಕೊಳ್ಳದವರಿಗೆ ಬೇಗನೆ ವಯಸ್ಸಾಗುತ್ತದೆ, ಗಂಭೀರ ಕಾಯಿಲೆಗಳಿಗೆ ಅವರು ಬಲಿಯಾಗುತ್ತಾರೆ. ಈ ಅಧ್ಯಯನದಲ್ಲಿ 45 ರಿಂದ 66 ವರ್ಷ ವಯಸ್ಸಿನ ಜನರನ್ನು ಪರೀಕ್ಷಿಸಲಾಯಿತು. ನಂತರ 70 ರಿಂದ 90 ವರ್ಷ ವಯಸ್ಸಿನ ಜನರ ಮೇಲೆ ಮುಂದಿನ ಪರೀಕ್ಷೆಗಳನ್ನು ನಡೆಸಲಾಯಿತು.
ಕಡಿಮೆ ನೀರು ಕುಡಿಯುವುದರಿಂದ ದೇಹದಲ್ಲಾಗುವ ಬದಲಾವಣೆ !
ಸಂಶೋಧನೆಯ ಪ್ರಕಾರ ಕಡಿಮೆ ನೀರು ಕುಡಿಯುವುದರಿಂದ ದೇಹದಲ್ಲಿ ಸೋಡಿಯಂ ಮಟ್ಟ ಹೆಚ್ಚಾಗುತ್ತದೆ. ಇದರಿಂದಾಗಿ ಜಲಸಂಚಯನದ ಮಟ್ಟ ಕೂಡ ಹೆಚ್ಚಾಗುತ್ತದೆ. ಕಡಿಮೆ ದ್ರವ ವಸ್ತುಗಳ ಸೇವನೆಯಿಂದ ರಕ್ತದಲ್ಲಿ ಹೆಚ್ಚು ಸೋಡಿಯಂ ಕಂಡುಬರುತ್ತದೆ. ರಕ್ತದಲ್ಲಿ ಹೆಚ್ಚು ಸೋಡಿಯಂ ಹೊಂದಿರುವ ಜನರು ಇತರರಿಗಿಂತ ವೇಗವಾಗಿ ವೃದ್ಧಾಪ್ಯಕ್ಕೆ ತುತ್ತಾಗುತ್ತಾರೆ.
ಅದೇ ಸಮಯದಲ್ಲಿ ಅಧಿಕ ಬಿಪಿ, ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದಲ್ಲದೇ ಇನ್ನೂ ಅನೇಕ ರೋಗಗಳು ಇವರನ್ನು ಆವರಿಸಿಕೊಳ್ಳಬಹುದು.
ರಕ್ತದಲ್ಲಿನ ಸೋಡಿಯಂ ಮಟ್ಟವು ಪ್ರತಿ ಲೀಟರ್‌ಗೆ 142 ಮಿಲಿಮೋಲ್‌ಗಳನ್ನು ಮೀರಬಾರದು. ರಕ್ತದಲ್ಲಿ ಇದಕ್ಕಿಂತ ಹೆಚ್ಚು ಸೋಡಿಯಂ ಹೊಂದಿರುವ ಜನರು ಹೃದಯ ವೈಫಲ್ಯ, ಪಾರ್ಶ್ವವಾಯು, ಶ್ವಾಸಕೋಶದ ಕಾಯಿಲೆ, ಮಧುಮೇಹ ಮತ್ತು ಬುದ್ಧಿಮಾಂದ್ಯತೆ ಸೇರಿದಂತೆ ಅನೇಕ ಸಮಸ್ಯೆಗಳ ಅಪಾಯವನ್ನು ಹೊಂದಿರುತ್ತಾರೆ. ಕಡಿಮೆ ನೀರು ಕುಡಿಯುವ ಮೂಲಕ ಈ ರೋಗಗಳಿಗೆ ತುತ್ತಾಗಬಹುದು.
ನಿರ್ಜಲೀಕರಣದಿಂದಾಗುವ ಸಮಸ್ಯೆಗಳು
ನಿರ್ಜಲೀಕರಣವು ಕೀಲು ನೋವು ಮತ್ತು ದೇಹದ ಉಷ್ಣಾಂಶದಲ್ಲಿ ವಿವಿಧ ಬದಲಾವಣೆಗಳನ್ನು ಉಂಟುಮಾಡಬಹುದು. ಇದರೊಂದಿಗೆ ಮಲಬದ್ಧತೆ, ಮೂತ್ರಪಿಂಡದಲ್ಲಿ ಕಲ್ಲುಗಳಂತಹ ಸಮಸ್ಯೆಗಳೂ ಬರಬಹುದು. ನೀರನ್ನು ಸರಿಯಾಗಿ ಕುಡಿಯದೇ, ಹೆಚ್ಚು ಸಿಹಿತಿಂಡಿಗಳನ್ನು ಸೇವಿಸಿದರೆ ಅದು ಕೂಡ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ.