
ಖರ್ಚು ಜಾಸ್ತಿ, ಗಳಿಕೆ ಕಡಿಮೆಯಾದಾಗ ತಿಂಗಳ ಕೊನೆ ಕಷ್ಟವಾಗುತ್ತದೆ. ಬೇರೆಯವರಿಂದ ಸಾಲ ಪಡೆಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೋಟ್ಯಾಧಿಪತಿಯಾಗಬೇಕೆಂದು ಅನೇಕರು ಕನಸು ಕಾಣ್ತಾರೆ. ಆದ್ರೆ ನಾವು ಮಾಡುವ ಕೆಲ ತಪ್ಪುಗಳು ನಮ್ಮ ಕನಸು, ನನಸಾಗದಿರಲು ಕಾರಣವಾಗುತ್ತದೆ.
ಸಮಯಕ್ಕೆ ಹೂಡಿಕೆ ಮಾಡಲು ಪ್ರಾರಂಭಿಸಬೇಕು. ಸಾಮಾನ್ಯವಾಗಿ ಯುವಜನತೆ ಹೂಡಿಕೆಯ ಬಗ್ಗೆ ಯೋಚಿಸುವುದಿಲ್ಲ. ಈ ಕಾರಣದಿಂದಾಗಿ ಅಮೂಲ್ಯವಾದ ಸಮಯ ಹಾಳಾಗುತ್ತದೆ. ಈ ಸಮಯದಲ್ಲಿ ಗಳಿಸುವ ಉತ್ಸಾಹವಿರುತ್ತದೆ. ಆಗ್ಲೇ ಹೂಡಿಕೆ ಶುರುಮಾಡಿದ್ರೆ ಉತ್ತಮ ಲಾಭ ಪಡೆಯಬಹುದು.
ಹೂಡಿಕೆಯನ್ನು ಬೇಗ ಪ್ರಾರಂಭಿಸಿದ್ರೆ ಲಾಭ ಬೇಗ ಸಿಗುತ್ತದೆ. ಯುವಕರಲ್ಲಿ ಹಣಕಾಸಿನ ಜವಾಬ್ದಾರಿಗಳು ಕಡಿಮೆ. ಯುವಕರು ವಿಮಾ ಪಾಲಿಸಿಯಲ್ಲಿ ಹೂಡಿಕೆ ಮಾಡಿದರೆ, ಅಗತ್ಯವಾದ ಖರ್ಚುಗಳನ್ನು ನಿಭಾಯಿಸಿಕೊಂಡು ಪಾಲಿಸಿಯ ಪ್ರೀಮಿಯಂ ಪಾವತಿಸುವುದು ಕಷ್ಟವಾಗುವುದಿಲ್ಲ. ವಯಸ್ಸು ಹೆಚ್ಚಾದಂತೆ ಸಂಸಾರ ದೊಡ್ಡದಾಗುವ ಜೊತೆಗೆ ಖರ್ಚು ಹೆಚ್ಚಾಗುತ್ತದೆ. ಆಗ ಪಾಲಿಸಿ ಪ್ರೀಮಿಯಂ ತುಂಬುವುದು ಕಷ್ಟವಾಗುತ್ತದೆ.
ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡಿದ್ದರೂ ಅದನ್ನು ಕಾಲಕಾಲಕ್ಕೆ ಪರಿಶೀಲಿಸುತ್ತಿರಬೇಕು. ನಿಯಮಿತ ವಿಮರ್ಶೆಗಳನ್ನು ಮಾಡದಿದ್ದರೆ, ನಿಮ್ಮ ಹಣದ ಮೇಲೆ ನಿಮಗೆ ಸಿಗಬೇಕಾದ ಲಾಭ ಸಿಗುವುದಿಲ್ಲ. ಆದಾಯ, ಅಪಾಯ, ವೆಚ್ಚ ಇತ್ಯಾದಿಗಳ ಬಗ್ಗೆ ನಿಮಗೆ ಸಂಪೂರ್ಣ ಜ್ಞಾನವಿರಬೇಕು.
ಪ್ರತಿಯೊಬ್ಬರೂ ತಮ್ಮ ಸಂಬಳದ ಶೇಕಡಾ 70 ರಷ್ಟು ಖರ್ಚು ಮಾಡಬೇಕು. ಉಳಿದ ಶೇಕಡಾ 30ರಷ್ಟನ್ನು ಉಳಿತಾಯ ಮಾಡಬೇಕು. ಹಬ್ಬದ ಅವಧಿಯಲ್ಲಿ ಖರ್ಚು ಹೆಚ್ಚಾದಾಗ ಚಿಂತಿಸಬೇಕಾಗಿಲ್ಲ. ಉಳಿತಾಯ ಮಾಡಿದ ಹಣದಲ್ಲಿ ಸ್ವಲ್ಪ ಹಣವನ್ನು ತೆಗೆಯಬಹುದು. ಯಾವ ಹೂಡಿಕೆಯಲ್ಲಿ ಹೆಚ್ಚಿನ ಲಾಭ ಸಿಗುತ್ತದೆ. ಯಾವುದು ಸುರಕ್ಷಿತವೆಂದು ಪರಿಶೀಲನೆ ಮಾಡಿದ ನಂತ್ರ ಹೂಡಿಕೆ ಶುರು ಮಾಡಬೇಕು.
ಸ್ವಂತ ವ್ಯವಹಾರವನ್ನು ಹೊಂದಿದ್ದರೆ, ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಅಪಾಯ ಎದುರಿಸುವುದ್ರಿಂದ ಸಾಕಷ್ಟನ್ನು ಕಲಿಯಬಹುದು. ಸಂದರ್ಭಗಳನ್ನು ಚೆನ್ನಾಗಿ ವಿಶ್ಲೇಷಿಸಿ ಹೂಡಿಕೆ ಮಾಡುವುದನ್ನು ಮರೆಯಬೇಡಿ.
ಇತ್ತೀಚಿನ ದಿನಗಳಲ್ಲಿ ಅನವಶ್ಯಕ ಖರ್ಚು ಹೆಚ್ಚಾಗ್ತಿದೆ. ಸುಂದರವಾಗಿ ಕಾಣಬೇಕು, ಐಷಾರಾಮಿ ಬದುಕಿನ ಆಸೆಗೆ ಖರ್ಚನ್ನು ಮೈಮೇಲೆ ಎಳೆದುಕೊಳ್ತಾರೆ. ಸಾಲ ಹೆಚ್ಚಾಗುತ್ತದೆ. ಆದ್ರೆ ಇದು ಒಳ್ಳೆಯದಲ್ಲ. ಮನೆ ಅಥವಾ ಮಕ್ಕಳ ಶಿಕ್ಷಣಕ್ಕಾಗಿ ಸಾಲವನ್ನು ತೆಗೆದುಕೊಂಡರೆ ಅದು ಉತ್ತಮವಾಗಿರುತ್ತದೆ. ಆದರೆ ಅನವಶ್ಯಕ ಖರ್ಚಿಗಾಗಿ ಎಂದಿಗೂ ಸಾಲ ತೆಗೆದುಕೊಳ್ಳಬೇಡಿ.