ಕ್ರಿಪ್ಟೋಕರೆನ್ಸಿ ಉದ್ಯಮದ ಪ್ರಮುಖ ವ್ಯಕ್ತಿ ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್‌ಗೆ 25 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈತ ಕ್ರಿಪ್ಟೋಕರೆನ್ಸಿ ಡೆರಿವೇಟಿವ್‌ಗಳ ಎಕ್ಸ್‌ಚೇಂಜ್ ಎಫ್‌ಟಿಎಕ್ಸ್‌ನ ಸಂಸ್ಥಾಪಕ ಮತ್ತು ಸಿಇಓ. ಎಫ್‌ಟಿಎಕ್ಸ್ ಗ್ರಾಹಕರಿಂದ 8 ಬಿಲಿಯನ್ ಡಾಲರ್ ಕದ್ದಿದ್ದಕ್ಕಾಗಿ ಸ್ಯಾಮ್‌ಗೆ ಜೈಲು ಶಿಕ್ಷೆಯಾಗಿದೆ.
ಬ್ಯಾಂಕ್‌ಮ್ಯಾನ್-ಫ್ರೈಡ್ ವಹಿವಾಟಿನಲ್ಲಿ ಅತ್ಯಂತ ಪರಿಣಿತನೆಂದು ಹೆಸರುವಾಸಿಯಾಗಿದ್ದರು. ಆದರೆ ಸಾಕಷ್ಟು ವಿವಾದಗಳೊಂದಿಗೆ ಸಹ ಥಳುಕು ಹಾಕಿಕೊಂಡಿದ್ದರು. ಈತ ಅಪರಾಧಿಯೆಂದು ನವೆಂಬರ್ 2ರಂದೇ ನ್ಯಾಯಾಲಯ ಘೋಷಿಸಿತ್ತು. ಮ್ಯಾನ್‌ಹ್ಯಾಟನ್‌ನಲ್ಲಿ ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ US ಜಿಲ್ಲಾ ನ್ಯಾಯಾಧೀಶ ಲೂಯಿಸ್ ಕಪ್ಲಾನ್ ಈ ನಿರ್ಧಾರವನ್ನು ಪ್ರಕಟಿಸಿದ್ದರು.
32 ವರ್ಷದ ಈತ 2022 ರಲ್ಲಿ ಎಫ್‌ಟಿಎಕ್ಸ್ ಪತನಕ್ಕೆ ಸಂಬಂಧಿಸಿದ ಎರಡು ವಂಚನೆ ಮತ್ತು ಐದು ಪಿತೂರಿಗಳಲ್ಲಿ ಶಿಕ್ಷೆಗೊಳಗಾಗಿದ್ದಾರೆ. ಭವಿಷ್ಯದಲ್ಲಿ ಆತನಿಂದ ಮತ್ತಷ್ಟು ಸಂಭಾವ್ಯ ಬೆದರಿಕೆಗಳಿರುವುದರಿಂದ ನ್ಯಾಯಾಧೀಶರು ‘ಕ್ರಿಪ್ಟೋ ಕಿಂಗ್’ಗೆ 25 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.
ಬ್ಯಾಂಕ್‌ಮ್ಯಾನ್ ಫ್ರೈಡ್ ಯಾರು?
ಸ್ಯಾಮ್ ಬ್ಯಾಂಕ್‌ಮ್ಯಾನ್-ಫ್ರೈಡ್ 2019 ರಲ್ಲಿ ಎಫ್‌ಟಿಎಕ್ಸ್ ಎಂಬ ಸಣ್ಣ ಸ್ಟಾರ್ಟ್‌ಅಪ್ ಆರಂಭಿಸಿದ್ದರು. ಇದು ವಿಶ್ವದ ಎರಡನೇ ಅತಿದೊಡ್ಡ ವಿನಿಮಯ ವೇದಿಕೆಯಾಗಿ ಪರಿವರ್ತನೆಯಾಯಿತು. 30 ತುಂಬುವ ಮೊದಲೇ ಈ ಯುವಕ ಬಿಲಿಯನೇರ್ ಆಗಿಬಿಟ್ಟಿದ್ದ. ನವೆಂಬರ್ 2022 ರಲ್ಲಿ ಕಂಪನಿಯ ಅಧಃಪತನ ಶುರುವಾಗಿತ್ತು.
ಎಫ್‌ಟಿಎಕ್ಸ್‌ನಿಂದ ತನ್ನ ಖಾಸಗಿ ಹೆಡ್ಜ್ ಫಂಡ್, ಅಲ್ಮೇಡಾ ರಿಸರ್ಚ್‌ಗೆ ಶತಕೋಟಿ ಡಾಲರ್‌ಗಳನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂಬುದು ಬಹಿಂಗವಾಗುತ್ತಿದ್ದಂತೆ, ಗ್ರಾಹಕರ ಹಿಂಪಡೆಯುವಿಕೆ ಪ್ರವಾಹದಂತೆ ನುಗ್ಗಿ ಬಂದಿತ್ತು. ಕಂಪನಿಯ ವಹಿವಾಟಿನ ಸಂದರ್ಭದಲ್ಲಿ ತಾನು ಕೆಟ್ಟ ನಿರ್ಧಾರ ತೆಗೆದುಕೊಂಡಿರುವುದನ್ನು ವಿಚಾರಣೆ ವೇಳೆ ಬ್ಯಾಂಕ್‌ಮ್ಯಾನ್ ಫ್ರೈಡ್ ಒಪ್ಪಿಕೊಂಡಿದ್ದಾರೆ. ಆದರೆ ಹಣಕಾಸಿಗೆ ಸಂಬಂಧಿಸಿದ ಕಾನೂನುಗಳ ಉಲ್ಲಂಘನೆಯನ್ನು ನಿರಾಕರಿಸಿದ್ದಾರೆ.