ತೂಕ ಇಳಿಸಿಕೊಳ್ಳೋದು ಅತ್ಯಂತ ಪ್ರಯಾಸದ ಕೆಲಸ. ಆದ್ರೆ ಆಸ್ಟ್ರೇಲಿಯಾದ ಮಹಿಳೆಯೊಬ್ಬಳು ಸುಲಭವಾಗಿ 47 ಕೆಜಿ ತೂಕ ಇಳಿಸಿಕೊಂಡಿದ್ದಾಳೆ. 25 ವರ್ಷದ ಸಮಂತಾ ಅಬ್ರೂ ಆಸ್ಟ್ರೇಲಿಯಾದ ಆಸ್ಪತ್ರೆಯೊಂದರಲ್ಲಿ ನರ್ಸ್. ಆಕೆಯ ತೂಕ 115 ಕೆಜಿಯಷ್ಟಿತ್ತು. ಈ ಸಮಂತಾಗೆ ಅನೇಕ ಆರೋಗ್ಯ ಸಮಸ್ಯೆಗಳಾಗುತ್ತಿದ್ದವು.
ಮೊದಲು ಆಕೆ ನಿಯಮಿತವಾಗಿ ವಾಕಿಂಗ್ ಮಾಡಲು ಪ್ರಾರಂಭಿಸಿದಳು. ಇದರ ಜೊತೆಗೆ ಆರೋಗ್ಯಕರ ಆಹಾರ ಸೇವನೆಯನ್ನೂ ಮಾಡಲಾರಂಭಿಸಿದ್ಲು. ಆರೋಗ್ಯವು ಸುಧಾರಿಸುವುದರ ಜೊತೆಗೆ ಸ್ವಲ್ಪ ಸಮಯದಲ್ಲೇ ಅವಳ ತೂಕ 47 ಕೆಜಿಯಷ್ಟು ಕಡಿಮೆಯಾಯಿತು.
ಈ ಮಹಿಳೆಗೆ ಬೊಜ್ಜಿನ ಸಮಸ್ಯೆ ಬಂದಿದ್ದು ಆಕೆಯ ಕಳಪೆ ಜೀವನಶೈಲಿಯಿಂದಾಗಿ. ಬಾಲ್ಯದಿಂದಲೂ ಸಮಂತಾಗೆ ದೈಹಿಕ ಚಟುವಟಿಕೆಗಳನ್ನು ಮಾಡಲು ಇಷ್ಟವಿರಲಿಲ್ಲ. ರಾತ್ರಿಯ ಊಟದ ನಂತರ ಆಕೆ ಏನಾದರೂ ಸಿಹಿ ಅಥವಾ ಜಂಕ್ ತಿನ್ನುತ್ತಿದ್ಲು. ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಈ ಮಹಿಳೆ ಪ್ರತಿದಿನ ವಾಕಿಂಗ್ ಪ್ರಾರಂಭಿಸಿದ್ದಾಳೆ. ಪ್ರತಿನಿತ್ಯ 10,000 ಹೆಜ್ಜೆ ನಡೆಯುವ ಮೂಲಕ ಸುಲಭವಾಗಿ ತೂಕ ಇಳಿಸಿದ್ದಾಳೆ.
ಈಗ ಸಮಂತಾ ಪ್ರತಿದಿನ 10,000 ಹೆಜ್ಜೆಗಳಷ್ಟು ವಾಕ್ ಮಾಡುತ್ತಾಳೆ. ವಾರಕ್ಕೆ 5 ಕಿಲೋಮೀಟರ್ ಓಟ, 4 ದಿನ ಜಿಮ್‌ನಲ್ಲಿ ವ್ಯಾಯಾಮ ತಪ್ಪಿಸುವುದಿಲ್ಲ. ಪ್ರತಿದಿನ 10,000 ಹೆಜ್ಜೆಗಳಷ್ಟು ನಡೆಯುವುದು ತೂಕ ನಷ್ಟಕ್ಕೆ ಉತ್ತಮ ತಂತ್ರ. ಏಕೆಂದರೆ ನಿಯಮಿತ ವಾಕಿಂಗ್ ಸ್ನಾಯುಗಳನ್ನು ಬಲಪಡಿಸುತ್ತದೆ, ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಕ್ಯಾಲೊರಿಗಳನ್ನು ಸುಡುವಲ್ಲಿ ಸಹಾಯ ಮಾಡುತ್ತದೆ.
ತೂಕ ನಷ್ಟಕ್ಕೆ ವ್ಯಾಯಾಮ ಮಾತ್ರವಲ್ಲ, ಸರಿಯಾದ ಆಹಾರವೂ ಅಗತ್ಯ. ಸಮಂತಾ ಪಿಜ್ಜಾದಂತಹ ಕೊಬ್ಬಿನ ಮತ್ತು ಅನಾರೋಗ್ಯಕರ ಆಹಾರಗಳನ್ನು ತಿನ್ನುವುದಿಲ್ಲ. ಬೆಳಗಿನ ಉಪಾಹಾರಕ್ಕಾಗಿ ಓಟ್ಸ್ ಅನ್ನು ಹಣ್ಣುಗಳೊಂದಿಗೆ ತಿನ್ನುತ್ತಾರೆ. ಇದಲ್ಲದೆ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಚಿಕನ್ ಸೇವಿಸುತ್ತಾಳೆ.
ತೂಕ ನಷ್ಟವು ಒಂದು ಪ್ರಯಾಣವಾಗಿದೆ. ಸಮಂತಾ 47 ಕೆಜಿ ತೂಕ ಇಳಿಸಿಕೊಳ್ಳಲು ಸುಮಾರು ಒಂದು ವರ್ಷ ಬೇಕಾಯಿತು. ಪ್ರಯತ್ನಪಟ್ಟರೆ ಯಶಸ್ಸು ಖಚಿತ ಎಂಬುದಕ್ಕೆ ಈಕೆಯೇ ಉದಾಹರಣೆ.