ಕೊರೊನಾ ಮೂರನೇ ಅಲೆ ತಡೆಗಟ್ಟಲು ದೇಶದಲ್ಲಿ ಗರಿಷ್ಠ ಪ್ರಮಾಣದ ಜನಸಂಖ್ಯೆಗೆ ಕೋವಿಡ್-19 ತಡೆ ಲಸಿಕೆ ಹಾಕುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ವಿಜ್ಞಾನಿಗಳು, ತಜ್ಞವೈದ್ಯರು ಕೂಡ ಇದೇ ಅಭಿಪ್ರಾಯ ಹೊಂದಿದ್ದಾರೆ. ಈ ಸದುದ್ದೇಶ ಮತ್ತು ಮುನ್ನೆಚ್ಚರಿಕೆಗೆ ಸಾಥ್ ಕೊಡುತ್ತಿರುವುದು ಎನ್‌ಜಿಒಗಳು, ಸ್ವಯಂಸೇವಕರು, ಸಂಘ-ಸಂಸ್ಥೆಗಳು ಮತ್ತು ನಮ್ಮ ನಿಮ್ಮಂತೆಯೇ ಕೆಲವು ಜನಸಾಮಾನ್ಯರು.
ಅಸ್ಸಾಂನಲ್ಲಿ ಎಲೆಕ್ಟ್ರಿಕ್ ಆಟೋರಿಕ್ಷಾ ಹೊಂದಿರುವ ಮಹಿಳೆ ಧನ್‌ಮೊನಿ ಬೋರಾ ಕೂಡ ಲಸಿಕೆಗಳನ್ನು ಜನರಿಗೆ ತಲುಪಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದಾರೆ.
ಬೆಳಗ್ಗೆ 9.20ಕ್ಕೆ ಮನೆಯಿಂದ ಹೊರಡುವ ಅವರು, ಆಟೋರಿಕ್ಷಾದಲ್ಲಿ ಲಸಿಕೆಗಳನ್ನು ಮತ್ತು ಇತರ ಪೂರಕ ಔಷಧಗಳು, ವೈದ್ಯಕೀಯ ಸಾಮಗ್ರಿಗಳನ್ನು ಸಮೀಪದ ಆರೋಗ್ಯ ಇಲಾಖೆಯಿಂದ ಪಡೆದುಕೊಳ್ಳುತ್ತಾರೆ. ಆಶಾ ಕಾರ್ಯಕರ್ತೆಯರ ತಂಡದೊಂದಿಗೆ, ಹಿಂದಿನ ದಿನವೇ ನಿಗದಿಯಾಗಿರುವ ಪ್ರದೇಶದಲ್ಲಿನ ಸಂಘ-ಸಂಸ್ಥೆಗಳ ಕಚೇರಿ ಅಥವಾ ಮೆಡಿಕಲ್ಸ್ ಬಳಿ ರಿಕ್ಷಾ ನಿಲ್ಲಿಸುತ್ತಾರೆ. ರಿಕ್ಷಾದಲ್ಲಿನ ಮೈಕ್‌ನಲ್ಲಿ ಲಸಿಕೆ ಹಾಕಿಸಿಕೊಳ್ಳಲು ಬರುವಂತೆ ಜನರಿಗೆ ಆಹ್ವಾನ ನೀಡುತ್ತಾರೆ.
ಶಿಕ್ಷಕರ ನೇಮಕಾತಿ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್: ನೇಮಕಾತಿ ಶೀಘ್ರ; ಸಚಿವ ಬಿ.ಸಿ. ನಾಗೇಶ್ ಮಾಹಿತಿ
ದಾಖಲೆ ಪರಿಶೀಲಿಸಿ ಲಸಿಕೆಗಳನ್ನು ಜನರಿಗೆ ಹಾಕುತ್ತಾರೆ. ಇದುವರೆಗೂ 2500 ಜನರಿಗೆ ರಿಕ್ಷಾ ಮಹಿಳೆ ಬೋರಾ ಅವರು ಲಸಿಕೆ ಹಾಕಿಸಿದ್ದಾರೆ. ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಲು ಆಗದೆಯೇ ಮನೆಯಲ್ಲೇ ಹಾಸಿಗೆ ಹಿಡಿದಿರುವ ವೃದ್ಧರಿಗೆ, ರಿಕ್ಷಾದಲ್ಲಿ ಲಸಿಕೆ ಮತ್ತು ನರ್ಸ್‌ರನ್ನು ಕರೆದೊಯ್ದು ವ್ಯಾಕ್ಸಿನ್ ಕೊಡಿಸಿದ ಕೀರ್ತಿ ಇವರದ್ದು.
30 ವರ್ಷದ ಆಸುಪಾಸಿನ ಧನ್‌ಮೊನಿಗೆ ಈ ಸೇವೆಯಿಂದ ಲಾಭವೇನು ಇಲ್ಲ. ಅಷ್ಟಕ್ಕೂ ಆಕೆ ತನಗೆ ಕಿರುಕುಳ ನೀಡುತ್ತಿದ್ದ ಪತಿಯಿಂದ ಬೇರೆಯಾಗಿ ವರ್ಷಗಳೇ ಆಗಿವೆ. ತನ್ನ 12 ವರ್ಷದ ಮಗಳು, 10 ವರ್ಷದ ಮಗನ ಶಿಕ್ಷಣಕ್ಕಾಗಿ ರಿಕ್ಷಾ ಚಾಲನೆ ಮಾಡಿಕೊಂಡು ಬದುಕು ರೂಪಿಸಿಕೊಳ್ಳುತ್ತಿದ್ದಾರೆ. ಇದರ ಜತೆಗೆ ಕೊರೊನಾ ಲಸಿಕೆ ಜಾಗೃತಿಯಲ್ಲೂ ತೊಡಗಿಸಿಕೊಂಡಿದ್ದಾರೆ. ಇರುವ ಒಂದೇ ಸ್ಮಾರ್ಟ್‌ಫೋನ್‌ನಲ್ಲಿ ಲಸಿಕೆಯ ಜಾಗೃತಿಯ ಸೇವೆ ಜತೆಗೆ ಮಕ್ಕಳ ಆನ್‌ಲೈನ್ ಶಿಕ್ಷಣವನ್ನು ಕೂಡ ಧನ್‌ಮೊನಿ ನಿಭಾಯಿಸುತ್ತಿದ್ದಾರೆ.