ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಸೋಲು ಕಂಡ ಭಾರತ ತಂಡದ ಅಭಿಮಾನಿಗಳಿಗೆ ಸ್ವಲ್ಪ ನಿರಾಸೆಯಾಗಿರುವುದು ಸಹಜ. ಆದರೆ ನ್ಯೂಜಿಲೆಂಡ್ ತಂಡದ ಆಟಗಾರರ ಕ್ರೀಡಾಸ್ಪೂರ್ತಿಯಿಂದ ದೇಶೀ ಕ್ರಿಕೆಟ್ ಪ್ರೇಮಿಗಳ ನಿರಾಸೆ ಸ್ವಲ್ಪ ಕಡಿಮೆಯಾಗಿದೆ ಎಂದರೆ ತಪ್ಪಾಗಲಾರದು.
ಅದರಲ್ಲೂ, ಐಸಿಸಿಯ ಮೇಜರ್ ಇವೆಂಟ್ ಒಂದನ್ನು ಗೆದ್ದ ಖುಷಿಯಲ್ಲಿದ್ದ ಕಿವೀಸ್ ಪಡೆ ಗೆಲುವಿನ ನಡುವೆಯೂ ಭಾರತದ ಆಟಗಾರರೊಂದಿಗೆ ಬಹಳ ಗ್ರೇಸ್ಫುಲ್ ಆಗಿ ನಡೆದುಕೊಂಡು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ಪಂದ್ಯದಲ್ಲಿ ಅಮೋಘ ಆಟವಾಡಿ ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದ ಕಿವೀಸ್ ಪಡೆಯ ನಾಯಕ ಕೇನ್ ವಿಲಿಯಮ್ಸನ್ ಅವರು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿರನ್ನು ಅಪ್ಪಿಕೊಂಡು ಸಂತೈಸುತ್ತಿರುವ ಚಿತ್ರವೊಂದು ಆನ್ಲೈನ್ನಲ್ಲಿ ವೈರಲ್ ಆಗಿದ್ದು ಕ್ರಿಕೆಟ್ ಪ್ರೇಮಿಗಳ ಮನಗೆಲ್ಲುತ್ತಿದೆ.
2015 ಹಾಗೂ 2019ರ ಏಕದಿನ ವಿಶ್ವಕಪ್ಗಳಲ್ಲಿ ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಕಿವೀಸ್ ಪಡೆಗೆ ಇದೇ ಮೊದಲ ಬಾರಿ ಐಸಿಸಿಯ ಮಹತ್ವದ ಟ್ರೋಫಿಯೊಂದು ಒಲಿದಿದೆ.