ಅದೆಷ್ಟೋ ಜನರು ಬಟ್ಟಲು ತುಂಬಾ ಬಡಿಸಿಕೊಂಡು, ಹೊಟ್ಟೆ ತುಂಬುತ್ತಿದ್ದಂತೆ ಹೆಚ್ಚಾಗಿದ್ದನ್ನು ಬಿಸಾಕುವವರನ್ನು ನೋಡುತ್ತೇವೆ. ಇನ್ನೆಷ್ಟೋ ಜನರು ಬೇಕಾ ಬಿಟ್ಟಿಯಾಗಿ ಖರ್ಚು ಮಾಡಿ, ಮನಸೋ ಇಚ್ಚೆ ಕುಡಿದು, ತಿಂದು ಮಜಾ ಮಾಡುವುದರಲ್ಲೇ ಕಾಲ ಕಳೆಯುತ್ತಾರೆ. ಇವುಗಳ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪುಟ್ಟ ಬಡ ಬಾಲಕನೊಬ್ಬನ ವಿಡಿಯೋ ಕರುಳು ಹಿಡುವಂತಿದೆ.
ಬಡತನವನ್ನೇ ಹಾಸು ಹೊದ್ದಿರುವ ಮನೆಯಲ್ಲಿ ಊಟಕ್ಕೂ ಇಲ್ಲದ ಸ್ಥಿತಿ. ಆದರೂ ಬಾಲಕನೊಬ್ಬ ಉಪ್ಪು, ನೀರಿನ ಜೊತೆ ಅನ್ನವನ್ನು ಕಲಸಿಕೊಂಡು ಸೇವಿಸುತ್ತಿರುವ ದೃಶ್ಯ …… ಎಂತವರನ್ನೂ ಅಯ್ಯೋ ದೇವರೇ ಎಂದೆನಿಸಲಿರಲಾರದು.
ಸಾಮಾಜಿಕ ಜಾಲತಾಣಗಳಲಿ ವೈರಲ್ ಆಗಿರುವ ಬಡ ಬಾಲಕನ ವಿಡಿಯೋ ನಿಜಕ್ಕೂ ಕಳವಳವನ್ನುಂಟು ಮಾಡುತ್ತದೆ. ಶಾಲೆಗೆ ಹೋಗುವ ಯುನಿಫಾರ್ಮ್, ಬ್ಯಾಗ್ ನೊಂದಿಗೆ ಅಡುಗೆ ಮನೆಗೆ ಬರುವ ಬಾಲಕ ಪಾತ್ರೆಯಲ್ಲಿದ್ದ ಒಂದಿಷ್ಟು ಹಳೆ ಅನ್ನವನ್ನು ಬಟ್ಟಲಿಗೆ ಹಾಕಿಕೊಂಡು, ಅದಕ್ಕೆ ಒಂದಿಷ್ಟು ಉಪ್ಪು, ಒಲೆಯ ಮೇಲೆ ದೊಡ್ಡ ಪಾತ್ರೆಯಲ್ಲಿದ್ದ ಬಿಸಿ ನೀರನ್ನು ಹಾಕಿಕೊಂಡು ಕಲಸಿ ತಿನ್ನುತ್ತಿರುವ ದೃಶ್ಯ ಕರುಳು ಚುರ್ ಎನ್ನುವಂತಿದೆ. ಒಂದೆಡೆ ಬಡತನದ ಬೇಗೆಯಲ್ಲಿ ಬೇಯುತ್ತಿದ್ದರೂ ಇನ್ನೊಂದೆಡೆ ಏನೋ ಒಂದಿಷ್ಟು ಹೊಟ್ಟೆಗೆ ಹಾಕಿಕೊಂಡು ಲಗುಬಗೆಯಿಂದ ಶಾಲೆಗೆ ಹೋಗಬೇಕೆಂಬ ಹುಡುಗನ ಗಡಿಬಿಡಿ ಮನಮಿಡಿಯುವಂತಿದೆ.