ಮಂಗಳೂರು: ರಾಜ್ಯದ ಉಡುಪಿಯಿಂದ ಪ್ರಾರಂಭವಾದ ಹಿಜಾಬ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸದ್ದು ಮಾಡಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಅದರಾಚೆಗೆ ಕೋಮುದ್ವೇಷವನ್ನು ಹುಟ್ಟುಹಾಕುತ್ತಿರುವಾಗ ಕೋಮು ಸೂಕ್ಷ್ಮ ಜಿಲ್ಲೆ ಎಂಬ ಹೆಸರು ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯ ಹಿಂದೂ-ಮುಸ್ಲಿಂ ಸೌಹಾರ್ದತೆಯ ವಿಡಿಯೋ ವೈರಲ್ ಆಗಿದ್ದು, ಮಾನವೀಯತೆಯ ನಂಬಿಕೆಯನ್ನು ಪುನರ್ ಸೃಷ್ಟಿಸಿದೆ.
ಹೌದು, ಇಂಥದ್ದೊಂದು ಅಪರೂಪದ ಘಟನೆಗೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಪಟ್ಟಣ ಸಾಕ್ಷಿಯಾಗಿದೆ. ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ರಥೋತ್ಸವ ಹಿನ್ನೆಲೆಯಲ್ಲಿ ಫೆ.11ರಂದು ಓಕುಳಿ ಮೆರವಣಿಗೆ ಆಯೋಜಿಸಲಾಗಿತ್ತು. ರಸ್ತೆಯುದ್ದಕ್ಕೂ ನೆರೆದಿದ್ದ ಜನರು ಪರಸ್ಪರ ಓಕುಳಿ ಎರಚಿ ಸಂಭ್ರಮಿಸುತ್ತಿದ್ದರು. ವಾದ್ಯ, ಬ್ಯಾಂಡ್ ಗಳ ಶಬ್ಧವೂ ಮುಗಿಲುಮುಟ್ಟಿತು.
ಹೀಗೆ ಸರಾಗವಾಗಿ ಸಾಗುತ್ತಿದ್ದ ಮೆರವಣಿಗೆಯಲ್ಲಿ ಕೆಲವು ಕ್ಷಣಗಳಲ್ಲೇ ನಿಶ್ಯಬ್ಧವಾಯಿತು. ಮುಸ್ಲಿಂ ಸಮುದಾಯದ ಹಿರಿಯ ವ್ಯಕ್ತಿಯೊಬ್ಬರ ಶವಯಾತ್ರೆ ಬರುತ್ತಿದ್ದರಿಂದ ಮೆರವಣಿಗೆಯಲ್ಲಿದ್ದ ಹಿಂದೂ ಬಾಂಧವರು ತಮ್ಮ ನರ್ತನ ನಿಲ್ಲಿಸಿ, ಬದಿಗೆ ಸರಿದಿದ್ದಾರೆ. ಈ ಮೂಲಕ ಹಿಂದೂಗಳು ಗೌರವ ಸಲ್ಲಿಸಿದ್ದು, ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. ನಿಜವಾದ ಮಾನವೀಯತೆ ಅಂದ್ರೆ ಇದೆ ಅಲ್ಲವೇ ಅಂತಾ ಕೊಂಡಾಡಿದ್ದಾರೆ.