
ಇಷ್ಟದ ಸಂಗಾತಿಗೆ ಪ್ರೀತಿಯನ್ನು ವ್ಯಕ್ತಪಡಿಸಲು ಹಲವು ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಯುವ ಜೋಡಿಯಿಂದ ಹಿಡಿದು ವೃದ್ಧರೂ ಸಹ ತನ್ನ ಇನಿಯ/ ನಲ್ಲೆಗೆ ವಿಶೇಷ ದಿನದಂದು, ಹೂ, ವಿಶೇಷ ಪತ್ರ, ಉಡುಗೊರೆ, ವಿಶೇಷ ಊಟ ಕೊಡಿಸುವುದು ಸೇರಿದಂತೆ ಆ ದಿನವನ್ನು ವಿಶೇಷವನ್ನಾಗಿಸುವ ಹಲವು ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಇಂತಹದನ್ನು ಪ್ರದರ್ಶಿಸುವ ವಿಡಿಯೋವೊಂದು ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ವಯಸ್ಸಾದ ವ್ಯಕ್ತಿ ತನ್ನ ಹೆಂಡತಿಯ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ್ದು ಭಾವುಕಗೊಳಿಸಿದೆ.
ಇಂಗ್ಲೆಂಡ್ ಮೂಲದ ಜೋ ಕಿಯೋಗ್ ಅವರು ತಮ್ಮ ಪತ್ನಿ ಜೇನ್ ಅವರ 73ನೇ ಹುಟ್ಟುಹಬ್ಬದಂದು ವಿಶೇಷ ಉಡುಗೊರೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಅವರು ತಮ್ಮ ಪತ್ನಿಗೆ ಜಪಾನೀಸ್ ಚೆರ್ರಿ ಹೂವಿನ ಗಿಡವನ್ನು ಉಡುಗೊರೆಯಾಗಿ ನೀಡಿದರು. ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, 78 ವರ್ಷದ ವ್ಯಕ್ತಿ ತನ್ನ ಹೆಂಡತಿಯನ್ನು ಗಿಡ ನೆಟ್ಟ ಹಿತ್ತಲಿಗೆ ಕರೆದುಕೊಂಡು ಹೋಗುವುದನ್ನು ನೋಡಬಹುದು. ಇದಕ್ಕೆ ಆಶ್ಚರ್ಯಚಕಿತರಾಗಿ ಸಂತಸಪಟ್ಟ ಜೇನ್ ತನ್ನ ಗಂಡನ ಕಾರ್ಯಕ್ಕೆ ತುಟಿ ಮೇಲೆ ಮುತ್ತಿಟ್ಟು ಅಪ್ಪುಗೆ ನೀಡಿ ಧನ್ಯವಾದ ತಿಳಿಸುತ್ತಾರೆ.
ಜೋ ಕಿಯೋಗ್ ಅವರ ಭಾವನಾತ್ಮಕ ಕೆಲಸದಿಂದ ಖುಷಿಪಟ್ಟ ಜೇನ್ ಅವರು ಸಹ ಗಂಡನಿಗೆ ಮತ್ತೊಂದು ಜಪಾನೀ ಚೆರ್ರಿ ಗಿಡವನ್ನು ನೀಡಿದರು. ಈ ದಂಪತಿಯ ಮಗಳು ಕೇನ್ ಕಿಯೋಗ್, ಈ ವಿಶೇಷ ವೀಡಿಯೊ ಹಂಚಿಕೊಂಡಿದ್ದಾರೆ. ಜೋ ಮತ್ತು ಜೇನ್ ಕಿಯೋಗ್ ಅವರು 40 ವರ್ಷಗಳ ಹಿಂದೆ ಮದುವೆಯಾಗಿದ್ದಾರೆ.