ನೀರು ನಮ್ಮ ಜೀವನಾಡಿಗಳಲ್ಲಿ ಒಂದಾಗಿದೆ. ನೀರಿಲ್ಲದೆ ನಾವು ಬದುಕಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ, ಇಲ್ಲೊಬ್ಬ ಬಾಲಕಿಗೆ ನೀರೆಂದ್ರೆ ಅಲರ್ಜಿಯಂತೆ..!
ಹೌದು, ಅಮೆರಿಕಾದ ಟೆಕ್ಸಾಸ್ ನ 15 ವರ್ಷದ ಬಾಲಕಿ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಆಕೆಯ ಮೈಗೆ ನೀರು ಸೋಕಿದ್ರೆ ಸಾಕು ದದ್ದುಗಳುಂಟಾಗುತ್ತದೆಯಂತೆ. ಅಬಿಗೈಲ್ ಬೆಕ್ ಎಂಬ ಬಾಲಕಿ 2019ರಲ್ಲಿ ತನ್ನ 13ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಈ ವಿಲಕ್ಷಣ ರೋಗಲಕ್ಷಣಗಳನ್ನು ಅನುಭವಿಸಿದ್ದಾಳೆ. ಕಳೆದ ತಿಂಗಳಷ್ಟೇ ಆಕೆಗೆ ಅಕ್ವಾಜೆನಿಕ್ ಉರ್ಟೇರಿಯಾಲ್ ಎಂದು ರೋಗನಿರ್ಣಯ ಮಾಡಲಾಯಿತು.
ಅಬಿಗೈಲ್‌ನ ಸ್ಥಿತಿ ಹೀಗಿದೆ ಅಂದ್ರೆ, ಸ್ನಾನ ಮಾಡುವಾಗ ಆಕೆಯ ಮೈ ಆಸಿಡ್ ನಿಂದ ಸುಟ್ಟುಹೋದಂತಿದೆ. ಹೀಗಾಗಿ ಆಕೆ ಪ್ರತಿ ಎರಡು ದಿನಗಳಿಗೊಮ್ಮೆ ಮಾತ್ರ ಬಹಳ ಕಷ್ಟಪಟ್ಟು ಸ್ನಾನ ಮಾಡುತ್ತಾಳೆ. ಇನ್ನು ನೀರು ಕುಡಿಯಲಂತೂ ಸಾಧ್ಯವೇ ಇಲ್ಲ ಎಂಬಂತಾಗಿದೆ. ನೀರು ಕುಡಿದ್ರೆ ಸಾಕು ವಾಂತಿಯಾಗುತ್ತದೆಯಂತೆ. ಹೀಗಾಗಿ ಕಳೆದ ಒಂದು ವರ್ಷದಿಂದ ಆಕೆ ನೀರನ್ನೇ ಕುಡಿದಿಲ್ಲ.
ಅಬಿಗೈಲ್, ಕುಡಿಯುವ ನೀರಿನ ಬದಲಿಗೆ ದಾಳಿಂಬೆ ಜ್ಯೂಸ್ ಅಥವಾ ಎನರ್ಜಿ ಡ್ರಿಂಕ್‌ಗಳನ್ನು ಕುಡಿಯುತ್ತಾಳೆ. ಆದರೆ, ಇದು ಆಕೆಯ ದೇಹಕ್ಕೆ ಸಾಕಷ್ಟು ದ್ರವವನ್ನು ಒದಗಿಸುವುದಿಲ್ಲ. ಹೀಗಾಗಿ ವೈದ್ಯರು ಆಕೆಗೆ ಪುನರ್ಜಲೀಕರಣ ಮಾತ್ರೆಗಳನ್ನು ನೀಡಬೇಕಾಗುತ್ತದೆ. ಬಾಲಕಿಗೆ 2019ರಿಂದಲೂ ಈ ಸಮಸ್ಯೆ ಕಾಣಿಸಿಕೊಂಡಿದ್ದರೂ ಸಹ ಆಕೆ ವೈದ್ಯರನ್ನು ಭೇಟಿ ಮಾಡಲು ಇಷ್ಟಪಟ್ಟಿಲ್ಲ. ತನ್ನ ನೋವನ್ನು ಸಹಿಸಿಕೊಂಡಿದ್ದು, ಒಂದು ವೇಳೆ ಈ ವಿಚಾರ ಹೇಳಿದ್ರೆ ಹುಚ್ಚಿ ಎಂಬ ಪಟ್ಟ ಕಟ್ಟಿಬಿಡುತ್ತಾರೆ ಅನ್ನೋ ಭಯ ಬಾಲಕಿಗೆ ಕಾಡಿತ್ತಂತೆ. ಇದು ದಿನೇ ದಿನೇ ಹೆಚ್ಚಾಗುತ್ತಿದ್ದಂತೆ ಕೊನೆಗೆ ವೈದ್ಯರ ಭೇಟಿಗೆ ನಿರ್ಧರಿಸಿದ್ದಾಳೆ. ಆದರೆ, ರೋಗ ನಿರ್ಣಯ ಮಾಡಲು ಇದು ಬಹಳ ಸಮಯ ತೆಗೆದುಕೊಂಡಿತು. ದಿನೇ ದಿನೇ ಹೋದಂತೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.
ಸ್ನಾನ ಮಾತ್ರವಲ್ಲ, ಈಕೆ ವ್ಯಾಯಾಮ, ಕಣ್ಣೀರು ಹಾಕಲೂ ಕಷ್ಟ-ಕಷ್ಟ ಎಂಬಂತಾಗಿದೆ. ಕಣ್ಣೀರ ಹನಿಗಳು ಮುಖಕ್ಕೆ ಸೋಕಿದ್ರೆ ಸಾಕು ಅಲರ್ಜಿಯುಂಟಾಗುತ್ತದೆ. ಹಾಗೆಯೇ ಬೆವರ ಹನಿಗಳಿಂದಲೂ ದದ್ದುಗಳುಂಟಾಗುತ್ತದೆ.