ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರ ಟ್ವಿಟರ್ ನಲ್ಲಿ ಮನರಂಜಿಸುವ ಫೋಟೋ, ವಿಡಿಯೋಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಿರುತ್ತಾರೆ. ಸೇತುವೆಯ ಮೇಲಿನ ವಿಶಿಷ್ಟ ಚೈನಾ ಟೌನ್‌ನ ವಿಡಿಯೋವನ್ನು ಗೋಯೆಂಕಾ ಹಂಚಿಕೊಂಡಿದ್ದಾರೆ.
ಸಾಂಪ್ರದಾಯಿಕ ಮತ್ತು ಪಾಶ್ಚಿಮಾತ್ಯ ಶೈಲಿಯ ಕಟ್ಟಡಗಳ ಸಂಯೋಜನೆಯನ್ನು ಇಲ್ಲಿ ಕಾಣಬಹುದು. ಚೀನಾದ ಚಾಂಗ್ಕಿಂಗ್ ಲಿನ್ಷಿ ಎಂದು ಗುರುತಿಸಲ್ಪಟ್ಟಿರುವ ಈ ಪಟ್ಟಣದ ಅತ್ಯಂತ ಅಸಾಮಾನ್ಯ ವೈಶಿಷ್ಟ್ಯವೆಂದರೆ ಅದು ಸೇತುವೆಯ ಮೇಲೆ ನಿಂತಿದೆ.
ಈ ಎಂಜಿನಿಯರಿಂಗ್ ಅದ್ಭುತದ ವೈಮಾನಿಕ ನೋಟವನ್ನು ಪ್ರದರ್ಶಿಸುವ ವಿಡಿಯೋವನ್ನು ಗೋಯೆಂಕಾ ಹಂಚಿಕೊಂಡಿದ್ದಾರೆ. ಇಲ್ಲಿ ವಾಸಿಸುವುದನ್ನು ಕಲ್ಪಿಸಿಕೊಳ್ಳಿ ಎಂಬ ಶೀರ್ಷಿಕೆಯೊಂದಿಗೆ ಟ್ವೀಟ್ ಮಾಡಿದ್ದಾರೆ. ಸೇತುವೆಯ ಮೇಲಿರುವ ವಿವಿಧ ವರ್ಣರಂಜಿತ ಮನೆಗಳು ಮತ್ತು ಕಟ್ಟಡಗಳನ್ನು ವಿಡಿಯೋದಲ್ಲಿ ನೋಡಬಹುದು. ಇದು ಜಲಮೂಲದ ಮೇಲೆ ಎತ್ತರವಾಗಿ ನಿಂತಿದೆ. ಸುಂದರವಾದ ಭೂದೃಶ್ಯದಿಂದ ಸುತ್ತುವರೆದಿರುವ ಈ ಪಟ್ಟಣವು ಭವ್ಯವಾದ ಪರ್ವತಗಳ ಮಧ್ಯದಲ್ಲಿ ಕಂಡುಬರುತ್ತದೆ. ನೆಟ್ಟಿಗರು ಈ ವಿಡಿಯೋವನ್ನು ನೋಡಿ ಅಚ್ಚರಿಪಟ್ಟಿದ್ದಾರೆ.
ಈ ಪಟ್ಟಣದಲ್ಲಿ ವಾಸಿಸಲು ಬಯಸುತ್ತೀರೋ ಇಲ್ಲವೋ ಎಂಬ ಗೋಯೆಂಕಾ ಅವರ ಶೀರ್ಷಿಕೆಗೆ ಪ್ರತಿಕ್ರಿಯಿಸಿದ ಕೆಲವು ಬಳಕೆದಾರರು ವೈಫೈ ಮತ್ತು ದಿನಸಿ ವಸ್ತುಗಳನ್ನು ತಮ್ಮ ಮನೆ ಬಾಗಿಲಿಗೆ ತಲುಪಿಸಿದರೆ, ಇರಬಹುದು ಎಂದು ಹೇಳಿದ್ದಾರೆ. ಸಾವಿರಾರು ಮಂದಿ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಬಹುತೇಕ ಎಲ್ಲರೂ ಇದನ್ನು ಮೆಚ್ಚಿಕೊಂಡಿದ್ದಾರೆ.
ಅಂದಹಾಗೆ, ವಾಸ್ತುಶಿಲ್ಪದ ಕೆಲವು ಆಕರ್ಷಕ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಗೊಯೆಂಕಾ ಬಳಕೆದಾರರನ್ನು ರಂಜಿಸಿದ್ದು ಇದೇ ಮೊದಲಲ್ಲ. ಈ ಹಿಂದೆ, ಕೈಗಾರಿಕೋದ್ಯಮಿಯು ಬೆಂಗಳೂರಿನ ಜೈಲು ಮಾದರಿಯ ರೆಸ್ಟೋರೆಂಟ್‌ನ ವಿಡಿಯೋವನ್ನು ಹಂಚಿಕೊಂಡಿದ್ದರು.