ಲಂಡನ್: ಇಂಗ್ಲೆಂಡ್ನ ಮಹಿಳೆಯೊಬ್ಬರು ಪಾದರಕ್ಷೆಗಳನ್ನು ಧರಿಸದೇ ಎಲ್ಲೆಡೆ ಬರಿಗಾಲಿನಿಂದಲೇ ಪ್ರಯಾಣಿಸುವ ಮೂಲಕ ಸುದ್ದಿಯಾಗಿದ್ದಾರೆ. ಪಾದರಕ್ಷೆ ಎಂದರೆ ನನ್ನ ಪಾದಕ್ಕೆ ಜೈಲು ಇದ್ದಂತೆಯೇ, ಅದನ್ನು ಧರಿಸಿದರೆ ಬಂಧಿಸಿದಂತೆ ಆಗುತ್ತದೆ ಎನ್ನುವ ಮೂಲಕ ಎಲ್ ರಾಬರ್ಟ್ಸನ್ ಎಂಬ ಮಹಿಳೆ ಇಲ್ಲಿಯವರೆಗೆ ಪಾದರಕ್ಷೆ ಧರಿಸಿಲ್ಲ.
ಬರಿಗಾಲಿನಿಂದ ನಡೆಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಎಷ್ಟೇ ಹೇಳುತ್ತಿದ್ದರೂ, ಹಾಗೆ ನಡೆಯುವುದನ್ನು ನೆನಪಿಸಿಕೊಂಡರೆ ಭಯವಾಗುವ ಸ್ಥಿತಿಯಲ್ಲಿ ಎಲ್ ಅವರು ಯಾವುದೇ ಪ್ರದೇಶಕ್ಕೆ ಹೋಗುವುದಿದ್ದರೂ ಪಾದರಕ್ಷೆ ಧರಿಸುವುದಿಲ್ಲ. ಆದರೆ ವಿಚಿತ್ರ ಎಂದರೆ, ಆಕೆಯ ಪ್ರದೇಶದ ಸೂಪರ್ ಮಾರ್ಕೆಟ್ ಆಕೆ ಪಾದರಕ್ಷೆಗಳನ್ನು ಧರಿಸದೆ ಆವರಣಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿದೆ. ಆದರೂ ಎಲ್ ತನ್ನ ನಿರ್ಧಾರ ಬದಲಿಸಲಿಲ್ಲ.
25 ವರ್ಷದ ಬ್ರಿಸ್ಟಲ್ ನಿವಾಸಿ ಎಲ್ ಹೇಳುವ ಪ್ರಕಾರ ಬಾಲ್ಯದಿಂದಲೂ ಈಕೆ ಚಪ್ಪಲಿ ಧರಿಸಿಲ್ಲವಂತೆ. ಬರಿಗಾಲಿನಲ್ಲಿ ಹೋಗುವ ಭಾವನೆಯು “ವಿಮೋಚನೆ” ಎಂದು ನನಗೆ ಅನ್ನಿಸುತ್ತದೆ ಎಂದಿದ್ದಾಳೆ.
“ಬರಿಗಾಲಿನಲ್ಲಿ ಹೋಗುವುದರಿಂದ ನಾನು ಹೇಗೆ ಇರಬೇಕು ಮತ್ತು ಅದು ನಾನು ಎಷ್ಟು ಚೆನ್ನಾಗಿ ಕೆಲಸ ನಿರ್ವಹಿಸಬಲ್ಲೆ ಎಂಬುದನ್ನು ನಿರ್ಧರಿಸಲು ಅನುಕೂಲ ಆಗುತ್ತದೆ. ಎಷ್ಟೋ ಮಂದಿ ಬೂಟು ಇದ್ದರೆ ಪಾದ ಸುರಕ್ಷಿತ ಎಂದು ನಂಬುತ್ತಾರೆ. ಆದರೆ ಇದು ತಪ್ಪು, ಬೂಟು ಹಾಕುವುದರಿಂದ ಹಲವು ಸಮಸ್ಯೆಗಳು ಬರುತ್ತವೆ. ಇದೊಂದು ರೀತಿಯಲ್ಲಿ ಬಂಧನ ಇದ್ದಂತೆಯೇ ಸರಿ” ಎಂದಿದ್ದಾರೆ ಎಲ್. ಈಕೆಯ ಈ ಗುಣಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಇದು ಒಳ್ಳೆಯ ನಿರ್ಧಾರವಲ್ಲ ಎಂದಿದ್ದಾರೆ.