ಮನೆಯಲ್ಲಿ ದಿನ ದಿನಕ್ಕೂ ಖರ್ಚು ಹೆಚ್ಚಾಗ್ತಿದೆ. ಎಲ್ಲಿ ಹಣ ಖಾಲಿಯಾಗ್ತಿದೆ ಎಂಬುದ್ರ ಲೆಕ್ಕವೇ ಸಿಗ್ತಿಲ್ಲ ಎನ್ನುವವರಿದ್ದಾರೆ. ದಿನನಿತ್ಯ ನೀವು ಮಾಡುವ ಕೆಲಸದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡಲ್ಲಿ ನೀವು ವರ್ಷಕ್ಕೆ 2500 ರವರೆಗೆ ಉಳಿಸಬಹುದು. ಅಷ್ಟೇನಾ ಎನ್ನಬೇಡಿ. ನಾವು ಹೇಳ್ತಿರೋದು ಅಡುಗೆ ಸಿಲಿಂಡರ್ ಬಳಕೆಯ ವಿಚಾರದಲ್ಲಿ ಮಾತ್ರ.
ಯಸ್, ಕೆಲವರ ಮನೆಯಲ್ಲಿ ತಿಂಗಳಿಗೊಂದು ಸಿಲಿಂಡರ್ ಗ್ಯಾಸ್ ಬೇಕು. ಅಂದ್ರೆ 12 ತಿಂಗಳಿಗೆ 12 ಸಿಲಿಂಡರ್ ಖಾಲಿ. ಆದ್ರೆ ಕೆಲ ಸಣ್ಣಪುಟ್ಟ ಉಪಾಯಗಳಿಂದ ಒಂದು ತಿಂಗಳು ಬರುವ ಸಿಲಿಂಡರನ್ನು ಒಂದೂವರೆ ತಿಂಗಳವರೆಗೆ ಬರುವಂತೆ ಮಾಡಬಹುದು.
ಪ್ರೆಶರ್ ಕುಕ್ಕರ್ ಬಳಸಿ ಅನ್ನ ಮಾಡಿದ್ರೆ ನೀವು ಶೇಕಡಾ 20 ರಷ್ಟು ಗ್ಯಾಸ್ ಉಳಿಸಬಹುದು. ಬೇಳೆ, ತರಕಾರಿ ಬೇಯಿಸಲು ಕುಕ್ಕರ್ ಬಳಸಿದ್ರೆ ಶೇಕಡಾ 40ರಷ್ಟು ಗ್ಯಾಸ್ ಉಳಿತಾಯವಾಗಲಿದೆ. ಹಾಗಾಗಿ ಅಡುಗೆ ಮನೆಯಲ್ಲಿ ಪ್ರೆಶರ್ ಕುಕ್ಕರ್ ಇರಲಿ.
ಒಂದೊಂದು ಆಹಾರಕ್ಕೆ ಒಂದೊಂದು ಪ್ರಮಾಣದಲ್ಲಿ ನೀರು ಬೇಕು. ಕಡಿಮೆ ನೀರಿನಲ್ಲಿ ಬೇಯುವ ಆಹಾರಕ್ಕೆ ಕಡಿಮೆ ನೀರನ್ನು ಅವಶ್ಯವಾಗಿ ಹಾಕಿ. ಯಾಕೆಂದ್ರೆ ನೀರು ಎಕ್ಸ್ಟ್ರಾ ಗ್ಯಾಸನ್ನು ಹೀರುತ್ತದೆ.
ಆಹಾರ ಕುದಿಯಲು ಶುರುವಾಗುತ್ತಿದ್ದಂತೆ ಗ್ಯಾಸ್ ಒಲೆ ಉರಿಯನ್ನು ಕಡಿಮೆ ಮಾಡಿ. ಇದ್ರಿಂದ ಶೇಕಡಾ 25ರಷ್ಟು ಅಡುಗೆ ಅನಿಲವನ್ನು ಉಳಿಸಬಹುದೆಂದು ತಜ್ಞರು ಹೇಳಿದ್ದಾರೆ.
ಆದಷ್ಟು ಸಣ್ಣ ಪಾತ್ರೆಗಳನ್ನು ಅಡುಗೆಗೆ ಹೆಚ್ಚಾಗಿ ಬಳಸಿ. ದೊಡ್ಡ ಪಾತ್ರೆಗಳಿಗಿಂತ ಸಣ್ಣ ಪಾತ್ರೆಗಳನ್ನು ಬಳಸಿದ್ರೆ ಶೇಕಡಾ 5-10 ರಷ್ಟು ಗ್ಯಾಸ್ ಉಳಿಸಬಹುದಾಗಿದೆ.
ಆಹಾರ ಬೇಯುವಾಗ ಮುಚ್ಚಳವನ್ನು ಮುಚ್ಚಿಡಿ. ಹೀಗೆ ಮಾಡಿದಲ್ಲಿ ಆಹಾರ ಬೇಗ ಬೇಯುವ ಜೊತೆಗೆ ಕಡಿಮೆ ಗ್ಯಾಸ್ ಸಾಕಾಗುತ್ತದೆ.