ಬೆಂಗಳೂರು : ಈ ಬಾರಿ ನಾಡಹಬ್ಬ ಮೈಸೂರು ದಸರಾವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ಅಕ್ಟೋಬರ್ 3 ರಂದು ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9.15ಕ್ಕೆ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಉದ್ಘಾಟನೆ ದಿನವೇ ವಸ್ತು ಪ್ರದರ್ಶನ ಕೂಡ ಆರಂಭಿಸಲು ಸೂಚಿಸಲಾಗಿದೆ.
ಆಗಸ್ಟ್ 21ರಂದು ಬೆಳಗ್ಗೆ 10.10 ಗಂಟೆಯಿಂದ ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪೂಜೆ ಮಾಡಲಾಗುವುದು. ಅಕ್ಟೋಬರ್ 3 ರಿಂದ 12ರ ವರೆಗೆ ದಸರಾ ಉತ್ಸವ ನಡೆಯಲಿದೆ. ಸಂಪ್ರದಾಯದಂತೆ 9 ದಿನ ಕಾರ್ಯಕ್ರಮಗಳು ಹಾಗೂ 10 ನೇ ದಿನ ಜಂಬೂ ಸವಾರಿಗೆ ಏರ್ಪಾಡು ಮಾಡಲಾಗುತ್ತದೆ. ಅಕ್ಟೋಬರ್ 12 ರಂದು ಮಧ್ಯಾಹ್ನ 1.41 ರಿಂದ 2.10 ಗಂಟೆಯವರೆಗೆ ಜಂಬೂ ಸವಾರಿ, ನಂದಿ ಧ್ವಜ ಪೂಜೆ ಹಾಗೂ ಸಂಜೆ 4 ಗಂಟೆಯಿಂದ ಪುಷ್ಪಾರ್ಚನೆ ನಡೆಯಲಿದೆ.
ಈ ಬಾರಿಯ ದಸರಾದಲ್ಲಿ ವಿಶೇಷತೆ
ಯುವ ದಸರಾ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲೆ, ಪ್ರತಿಭೆ ಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಗೋಲ್ಡ್ ಕಾರ್ಡ್ ಗಳನ್ನು ಮುಂಚಿತವಾಗಿ ಮಾಡಬೇಕು. ಪಾರ್ಕಿಂಗ್, ಟ್ರಾಫಿಕ್, ಬಂದೋಬಸ್ತ್ ಕಡೆಗೆ ಪೊಲೀಸ್ ಇಲಾಖೆ ಹೆಚ್ಚಿನ ಗಮನ ಕೊಡಬೇಕು. . ಏರ್ ಶೋಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು ಮನವಿ ಮಾಡಲಾಗುವುದು. ಸ್ವಲ್ಪ ಹೆಚ್ಚಿನ ಸಮಯ ಏರ್ ಶೋ ನಡೆಸಲೂ ವಿನಂತಿಸಲಾಗುವುದು. ಅಧಿಕಾರಿಗಳು ಈಗಿನಿಂದಲೇ ಸಿದ್ಧತೆ ಆರಂಭಿಸಬೇಕು. ಮಾಮೂಲು ಹಳೆ ಪದ್ಧತಿಗಳಲ್ಲೇ ಆಯೋಜನೆ ಮಾಡುವುದಕ್ಕಿಂತ ಈ ಬಾರಿಯ ದಸರಾದಲ್ಲಿ ವಿಶೇಷತೆ ಇರಲಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.