ಏಸುವಿನ ಜನ್ಮದಿನ ಕ್ರಿಸ್ಮಸ್ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದೆ. ಪ್ರಪಂಚದಾದ್ಯಂತ ಹಬ್ಬದ ತಯಾರಿಗಳು ಜೋರಾಗಿಯೇ ನಡೆಯುತ್ತಿವೆ. ಕ್ರಿಸ್ಮಸ್ ಅಂದ್ರೆ ಮೊದಲಿಗೆ ನೆನಪಾಗೋದು ಕ್ರಿಸ್ಮಸ್ ಟ್ರೀ. ಇದಿಲ್ಲದಿದ್ರೆ ಹಬ್ಬವೇ ಅಪೂರ್ಣವಾಗಿರುತ್ತದೆ.
ಈ ಕ್ರಿಸ್ಮಸ್ ಟ್ರೀಗಳನ್ನು ಬಣ್ಣ-ಬಣ್ಣದ ವಿದ್ಯುತ್ ದೀಪಗಳು, ನಕ್ಷತ್ರ ಹೂಮಾಲೆಗಳು ಮುಂತಾದವುಗಳಿಂದ ಸುಂದರವಾಗಿ ಅಲಂಕರಿಸಲಾಗುತ್ತದೆ. ನೀವು ವಿದ್ಯುತ್ ದೀಪಗಳಿಂದ ಮರವನ್ನು ಅಲಂಕರಿಸಲು ಮುಂದಾದ್ರೆ ಈ ವೈರಲ್ ಆಗಿರುವ ವಿಡಿಯೋವನ್ನು ಗಮನಿಸಿ. ಇಲ್ಲದಿದ್ರೆ ಅಪಾಯ ಕಟ್ಟಿಟ್ಟಬುತ್ತಿ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಟ್ಯಾಂಡರ್ಡ್ಸ್ ಅಂಡ್ ಟೆಕ್ನಾಲಜಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ಅಗ್ನಿ ಅನಾಹುತವನ್ನು ತಡೆಗಟ್ಟುವ ಸಲುವಾಗಿ ಕ್ರಿಸ್‌ಮಸ್ ಟ್ರೀಯನ್ನು ಹೈಡ್ರೀಕರಿಸುವ ಪ್ರಾಮುಖ್ಯತೆಯನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ಲಿವಿಂಗ್ ರೂಮಿನೊಳಗೆ ಎರಡು ನೈಜ ಮರಗಳನ್ನು ಪರಸ್ಪರ ಪಕ್ಕದಲ್ಲಿ ಇರಿಸಿರುವುದನ್ನು ವಿಡಿಯೋ ತೋರಿಸಿದೆ. ಒಂದು ಕ್ರಿಸ್ಮಸ್ ಮರಕ್ಕೆ ನೀರನ್ನು ಚಿಮುಕಿಸಲಾಗುತ್ತಿದೆ. ಆದರೆ, ಇನ್ನೊಂದು ಮರ ಸಂಪೂರ್ಣ ಒಣಗಿದೆ. ಆಕಸ್ಮಿಕವಾಗಿ ಸಂಭವಿಸುವ ಬೆಂಕಿಯು ಒಣಗಿರುವ ಮರವನ್ನು ಬಹಳ ವೇಗವಾಗಿ ಹಬ್ಬಿ, ದಹಿಸಿ ಬಿಟ್ಟಿದೆ. ಅಲ್ಲದೆ ಅಕ್ಕ-ಪಕ್ಕ ಕೂಡ ಬೆಂಕಿ ಹಬ್ಬಿದೆ. ಆದರೆ, ನೀರು ಹಾಕಿದ ಮರಕ್ಕೆ ಬೆಂಕಿ ತಗುಲಿದ್ರೂ ಅದು ಕೇವಲ ಕಿಡಿಯಾಗಿಯಷ್ಟೇ ಉರಿದಿದ್ದು, ನಂತರ ಸ್ವಯಂಚಾಲಿತವಾಗಿ ನಂದಿದೆ.
ಕ್ರಿಸ್ಮಸ್ ಟ್ರೀಗೆ ತಗಲುವ ಬೆಂಕಿಯು ಸಾಮಾನ್ಯವಲ್ಲದಿದ್ದರೂ ಅದು ಸಂಭವಿಸಿದಾಗ ಭಾರಿ ಅನಾಹುತಾಗುವ ಸಾಧ್ಯತೆಯಿದೆ. ಹೀಗಾಗಿ ನಿಮ್ಮ ಮನೆಯನ್ನು ಬಹಳ ಎಚ್ಚರಿಕೆಯಿಂದ ಅಲಂಕರಿಸುವುದು ಒಳಿತು ಎಂದು ನ್ಯಾಷನಲ್ ಫೈರ್ ಪ್ರೊಟೆಕ್ಷನ್ ಅಸೋಸಿಯೇಷನ್ ತಿಳಿಸಿದೆ.