
ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ಭಿಕ್ನೂರ್ ಮಂಡಲದಲ್ಲಿ ರಾಯಗಟ್ಲಪಲ್ಲಿ ಗ್ರಾಮವಿದ್ದು, ಅಲ್ಲಿ 180 ಕುಟುಂಬದ 930 ಜನಸಂಖ್ಯೆಯನ್ನು ಹೊಂದಿದೆ.
ಕಾಮರೆಡ್ಡಿ ಪ್ರಥಮ ದರ್ಜೆ ವಿಶೇಷ ನ್ಯಾಯಿಕ ದಂಡಾಧಿಕಾರಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ನ್ಯಾಯಮೂರ್ತಿ ಶ್ರೀದೇವಿ ಅವರು ಈ ಗ್ರಾಮವನ್ನು ವ್ಯಾಜ್ಯ ಮುಕ್ತ ಗ್ರಾಮ ಎಂದು ಘೋಷಿಸಿ, ಇತ್ತೀಚಿನ ಸ್ವಾತಂತ್ರ್ಯ ದಿನಾಚರಣೆಯಂದು ಈ ಕುರಿತು ಪ್ರಮಾಣ ಪತ್ರವನ್ನು ಗ್ರಾಮ ಆಡಳಿತ ಸಮಿತಿ ಪ್ರತಿನಿಧಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.
ಕಳೆದ 40 ವರ್ಷಗಳಿಂದ ಗ್ರಾ.ಪಂ.ಅಧ್ಯಕ್ಷರು ತಮ್ಮ ಹಂತದಲ್ಲೇ ತಕರಾರುಗಳನ್ನು ಇತ್ಯರ್ಥಪಡಿಸುತ್ತಿದ್ದು, ಈ ಹಂತದಲ್ಲೇ ವ್ಯಾಜ್ಯ ಮುಗಿಸಿಕೊಳ್ಳುವ ಕೀರ್ತಿ ಗ್ರಾಮಸ್ಥರಿಗೆ ಸಲ್ಲುತ್ತದೆ. ಕಾಮರೆಡ್ಡಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಪ್ರಕಾರ, ದಾಖಲೆಗಳ ಪ್ರಕಾರ ಯಾವುದೇ ಕೌಟುಂಬಿಕ ದೌರ್ಜನ್ಯ ಮತ್ತು ಗ್ರಾಮಸ್ಥರ ನಡುವೆ ಯಾವುದೇ ವಿವಾದಗಳಿಲ್ಲ. ಇಲ್ಲಿಯವರೆಗೆ ಯಾವುದೇ ವ್ಯಾಜ್ಯಗಳಿಲ್ಲದ ಇಂತಹ ಗ್ರಾಮ ಸಿಕ್ಕಿರುವುದು ಸಂತಸ ತಂದಿದೆ ಎಂದು ತಿಳಿಸಿದ್ದಾರೆ.
ಗ್ರಾಮದ ಮುಖಂಡರು ಮಾತನಾಡಿ, ಮದ್ಯ ಸೇವನೆಯಿಂದ ಗ್ರಾಮಸ್ಥರ ನಡುವೆ ಘರ್ಷಣೆ, ವಾಗ್ವಾದಗಳು ನಡೆಯುವ ಸಾಧ್ಯತೆ ಇರುವುದರಿಂದ ಕಳೆದ 12 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ ಮದ್ಯದ ಅಂಗಡಿ ಮುಚ್ಚಲಾಗಿದೆ. ಯಾರಾದರೂ ಮದ್ಯ ಮಾರಾಟ ಮಾಡಿದರೆ ಗ್ರಾಮಾಡಳಿತ ಸಮಿತಿಗೆ 5 ಸಾವಿರ ದಂಡ ಪಾವತಿಸಬೇಕು ಎಂದು ನಿರ್ಣಯಿಸಲಾಗಿದೆ.
ಹಿರಿಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು 63 ಸದಸ್ಯರಿರುವ ಹಿರಿಯ ನಾಗರಿಕ ಸಮಿತಿಯೂ ಇದೆ. ಸಮಿತಿಯ ಸದಸ್ಯರು ಸಂಬಂಧಪಟ್ಟವರ ಮನೆಗೆ ಭೇಟಿ ನೀಡಿ ಹಿರಿಯರು ಮತ್ತು ಅವರ ಕುಟುಂಬದ ಸದಸ್ಯರ ನಡುವೆ ರಾಜಿ ಮಾಡಿಕೊಳ್ಳುತ್ತಾರೆ.
ಗ್ರಾಮವು ಸಂಪೂರ್ಣವಾಗಿ ಕೃಷಿಯ ಮೇಲೆ ಅವಲಂಬಿತವಾಗಿರುವುದರಿಂದ ಗ್ರಾಮಸ್ಥರು ಗ್ರಾಮದ ಮತ್ತು ಸುತ್ತಮುತ್ತಲಿನ ಕೊನೆಯ ಜಮೀನಿಗೆ ರಸ್ತೆಗಳನ್ನು ಹಾಕಿದ್ದಾರೆ. ಗ್ರಾಮವು ತರಕಾರಿಗಳನ್ನು ಬೆಳೆದು ಲಾಭದಾಯಕ ಬೆಲೆಗೆ ಹತ್ತಿರದ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುವ ಮೂಲಕ ಆರ್ಥಿಕವಾಗಿ ಸಬಲೀಕರಣಗೊಂಡಿದೆ.