ಮೂತ್ರಪಿಂಡ ಅಥವಾ ಕಿಡ್ನಿ ನಮ್ಮ ದೇಹದ ಪ್ರಮುಖ ಅಂಗ. ಇದು ಇಡೀ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಅನೇಕ ಬಾರಿ ಜನರು ಮೂತ್ರಪಿಂಡ ವೈಫಲ್ಯವನ್ನು ಎದುರಿಸುತ್ತಾರೆ. ತಪ್ಪು ಆಹಾರ ಪದ್ಧತಿ ಮತ್ತು ಕೆಟ್ಟ ಜೀವನಶೈಲಿಯಿಂದ ಈ ರೀತಿ ಆಗಬಹುದು. ಮೂತ್ರಪಿಂಡವು ಹಾನಿಗೊಳಗಾದಾಗ ಯಾವ ರೀತಿಯ ಸಂಕೇತಗಳನ್ನು ನೀಡುತ್ತದೆ ? ಯಾವ ಲಕ್ಷಣಗಳು ದೇಹದಲ್ಲಿ ಕಾಣಿಸಿಕೊಳ್ಳುತ್ತವೆ ಎಂಬುದನ್ನು ತಿಳಿದುಕೊಳ್ಳಬೇಕು. ಕಿಡ್ನಿ ವೈಫಲ್ಯವನ್ನು ಬಹುಬೇಗ ಪತ್ತೆಮಾಡಿ ಚಿಕಿತ್ಸೆ ಪಡೆಯಬೇಕು, ಇಲ್ಲದಿದ್ದಲ್ಲಿ ಪ್ರಾಣಕ್ಕೇ ಅಪಾಯ.
ಕಿಡ್ನಿ ವಿಫಲವಾದಾಗ ದೇಹವು ಸರಿಯಾಗಿ ಕೆಲಸ ಮಾಡುವುದಿಲ್ಲ, ತುಂಬಾ ದುರ್ಬಲವಾಗುತ್ತದೆ. ದೇಹದ ವಿವಿಧ ಭಾಗಗಳಲ್ಲಿ ಕೆಂಪು ಬಣ್ಣದ ದದ್ದುಗಳು ಕಾಣಿಸಿಕೊಳ್ಳಬಹುದು. ಇವು ವಿಪರೀತ ತುರಿಕೆ ಉಂಟುಮಾಡುತ್ತವೆ. ಚರ್ಮವು ತುಂಬಾ ಡ್ರೈ ಮತ್ತು ಒರಟಾಗಲು ಪ್ರಾರಂಭಿಸುತ್ತದೆ.
ಪದೇ ಪದೇ ಅತಿಯಾಗಿ ಮೂತ್ರ ವಿಸರ್ಜನೆಯಾಗುವುದು ಕೂಡ ಕಿಡ್ನಿ ವೈಫಲ್ಯದ ಸಂಕೇತ. ಮೂತ್ರಪಿಂಡಗಳು ಹಾನಿಗೊಳಗಾಗಿದ್ದರೆ ಈ ರೀತಿ ಪದೇ ಪದೇ ಮೂತ್ರವಿಸರ್ಜನೆಗೆ ಹೋಗಬೇಕಾಗುತ್ತದೆ. ಜೊತೆಗೆ ಮೂತ್ರ ವಿಸರ್ಜಿಸುವಾಗ ಉರಿ ಇರುತ್ತದೆ.
ದೇಹದಲ್ಲಿ ಊತ ಕಾಣಿಸಿಕೊಂಡರೆ ತಕ್ಷಣವೇ ನೀವು ಎಚ್ಚೆತ್ತುಕೊಳ್ಳಬೇಕು. ಕಿಡ್ನಿಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇದ್ದಾಗ ಈ ರೀತಿ ಆಗುತ್ತದೆ. ಮುಖದಲ್ಲಿ ಕೂಡ ಊತ ಕಂಡುಬರುತ್ತದೆ. ಕಿಡ್ನಿ ಫೇಲ್ ಆಗಿದ್ದರೆ ನಮಗೆ ಹಸಿವಾಗುವುದಿಲ್ಲ. ವಾಂತಿ ಅಥವಾ ವಾಕರಿಕೆ ಬಂದಂತೆ ಅನಿಸುತ್ತದೆ. ಈ ಚಿಹ್ನೆಯು ಮೂತ್ರಪಿಂಡ ವೈಫಲ್ಯದ ಸಂಕೇತವಾಗಿದೆ.