2018 ರ ಆಗಸ್ಟ್ ನಲ್ಲಿ ಬಿಡುಗಡೆಯಾದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾ ನಿಮಗೆ ನೆನಪಿರಬಹುದು. ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ ಈ ಸಿನಿಮಾ ಭರ್ಜರಿ ಯಶಸ್ಸು ಗಳಿಸಿತ್ತಲ್ಲದೆ, ಶೈಕ್ಷಣಿಕ ವಿಚಾರದಲ್ಲಿ ಗಡಿನಾಡು ಕನ್ನಡಿಗರು ಅನುಭವಿಸುತ್ತಿರುವ ಸಂಕಷ್ಟಗಳನ್ನು ತೆರೆದಿಟ್ಟಿತ್ತು. ಹಿರಿಯ ನಟ ಅನಂತನಾಗ್, ರಮೇಶ್ ಭಟ್ ಸೇರಿದಂತೆ ಈ ಚಿತ್ರದಲ್ಲಿ ನಟಿಸಿದ ಎಲ್ಲರೂ ತಮ್ಮ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು.
‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದಲ್ಲಿ ಕನ್ನಡಿಗರೇ ಅತಿ ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳಾಗಿರುವ ಶಾಲೆಗೆ ಮಲಯಾಳಿ ಶಿಕ್ಷಕನನ್ನು ಪಾಠ ಮಾಡಲು ನೇಮಿಸಲಾಗುತ್ತದೆ. ಹೀಗಾಗಿ ಪಾಠ ಅರ್ಥವಾಗದೆ ಶಾಲಾ ಮಕ್ಕಳು ಕಂಗಾಲಾಗುತ್ತಾರೆ. ಇದರ ವಿರುದ್ಧ ಆರಂಭವಾದ ಹೋರಾಟ ಬಳಿಕ ವಿವಿಧ ತಿರುವುಗಳನ್ನು ಪಡೆದುಕೊಳ್ಳುತ್ತದೆ. ಇದೀಗ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾ ಹೋಲುವಂತಹ ಮತ್ತೊಂದು ಘಟನೆ ನಡೆದಿದೆ.
ಹೌದು, ಗಡಿ ಪ್ರದೇಶ ಕಾಸರಗೋಡಿನ ದೇಲಂಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡೂರು ಗ್ರಾಮದ ಗೋರಿಗದ್ದೆ ಅಂಗನವಾಡಿಯಲ್ಲಿ 16 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಈ ಪೈಕಿ 14 ಮಂದಿ ಕನ್ನಡಿಗ ವಿದ್ಯಾರ್ಥಿಗಳು. ಆದರೂ ಸಹ ಈ ಅಂಗನವಾಡಿಗೆ ಈಗ ಮಲಯಾಳಿ ಶಿಕ್ಷಕಿಯನ್ನು ನೇಮಿಸಲಾಗಿದೆ. ಗಡಿ ಪ್ರದೇಶದಲ್ಲಿ ಎರಡು ಭಾಷೆ ತಿಳಿದವರನ್ನೇ ಶಿಕ್ಷಕರನ್ನಾಗಿ ನೇಮಿಸಬೇಕು ಎಂಬ ನಿಯಮವಿದ್ದರೂ ಸಹ ಅದನ್ನು ಇಲ್ಲಿ ಉಲ್ಲಂಘಿಸಲಾಗಿದೆ. ಸಂಬಂಧಪಟ್ಟವರು ಈಗಲಾದರೂ ಇತ್ತ ಗಮನಹರಿಸಿ ಲೋಪವನ್ನು ಸರಿಪಡಿಸಬೇಕೆಂದು ಗಡಿನಾಡ ಕನ್ನಡಿಗರು ಆಗ್ರಹಿಸಿದ್ದಾರೆ.