ದಿ ಗೋಟ್ ಲೈಫ್ ನಲ್ಲಿನ ನಟನೆಯಿಂದಾಗಿ ಸದ್ಯ ಭಾರೀ ಮೆಚ್ಚುಗೆ ಗಳಿಸುತ್ತಿರುವ ನಟ ಪೃಥ್ವಿರಾಜ್ ಸುಕುಮಾರನ್ ಮಲಯಾಳಂ ಚಿತ್ರರಂಗದ ಸ್ಟಾರ್ ಕಲಾವಿದರಲ್ಲಿ ಒಬ್ಬರು. ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರಗಳಲ್ಲಿ ಒಂದಾದ ಲೂಸಿಫರ್ ಅನ್ನು ನಿರ್ದೇಶಿಸಿದ ಪೃಥ್ವಿರಾಜ್ ಈಗ ಮುಂಬೈನಲ್ಲಿ ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಅವರ ನೆರೆಹೊರೆಯವರಾಗಿದ್ದಾರೆ.
ಪೃಥ್ವಿರಾಜ್ ಬಾಂದ್ರಾದ ಪಾಲಿ ಹಿಲ್‌ನಲ್ಲಿ 30 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಡ್ಯೂಪ್ಲೆಕ್ಸ್ ಅಪಾರ್ಟ್‌ಮೆಂಟ್ ಅನ್ನು ಖರೀದಿಸಿದ್ದಾರೆ.
ರಿಯಲ್ ಎಸ್ಟೇಟ್ ಸುದ್ದಿ ವೆಬ್‌ಸೈಟ್ ಸ್ಕ್ವೇರ್ ಫೀಟ್ ಇಂಡಿಯಾದ ಸಂಸ್ಥಾಪಕ ವರುಣ್ ಸಿಂಗ್ ಅವರು ಟೈಮ್ಸ್ ಆಫ್ ಇಂಡಿಯಾದೊಂದಿಗಿನ ಸಂಭಾಷಣೆಯಲ್ಲಿ ಒಪ್ಪಂದದ ವಿವರಗಳನ್ನು ಹಂಚಿಕೊಂಡಿದ್ದಾರೆ. ಪೃಥ್ವಿರಾಜ್ ಸುಕುಮಾರನ್ ಅವರ ಪ್ರೊಡಕ್ಷನ್ ಹೌಸ್ ಮುಂಬೈನ ಬಾಂದ್ರಾ (ಪಶ್ಚಿಮ) ದಲ್ಲಿನ ಪಾಲಿಹಿಲ್ ನಲ್ಲಿ 30.6 ಕೋಟಿ ರೂ.ಗೆ ಐಷಾರಾಮಿ ಡ್ಯೂಪ್ಲೆಕ್ಸ್ ಅನ್ನು ಖರೀದಿಸಿದೆ. ಅಪಾರ್ಟ್‌ಮೆಂಟ್ 276 ಚ.ಮೀ. (ಅಂದಾಜು 2,971 ಚದರ ಅಡಿ) ಒಳಗೊಂಡಿದೆ. 40 ಚ.ಮೀ ವಿಸ್ತೀರ್ಣದ ನಾಲ್ಕು ಕಾರ್ ಪಾರ್ಕಿಂಗ್ ಸ್ಥಳ ಇದೆ ಎಂದಿದ್ದಾರೆ.
ಪೃಥ್ವಿರಾಜ್ ಹಿಂದಿ ಚಲನಚಿತ್ರೋದ್ಯಮದಲ್ಲಿ ಗಣನೀಯ ಮಹತ್ತರ ಸ್ಥಾನ ಪಡೆಯಲು ಬಯಸುತ್ತಿರುವಂತೆ ತೋರುತ್ತಿದೆ. ಅವರು ರಾಣಿ ಮುಖರ್ಜಿ ಅವರೊಂದಿಗೆ 2012 ರ ಹಾಸ್ಯ ಚಲನಚಿತ್ರ ಅಯ್ಯದಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.
ನಂತರ ಅವರು ಕ್ರಮವಾಗಿ 2013 ಮತ್ತು 2017 ರಲ್ಲಿ ಆಕ್ಷನ್ ಥ್ರಿಲ್ಲರ್‌ಗಳಾದ ಔರಂಗಜೇಬ್ ಮತ್ತು ನಾಮ್ ಶಬಾನಾದಲ್ಲಿ ಕಾಣಿಸಿಕೊಂಡರು. ಪೃಥ್ವಿ ಸುಕುಮಾರನ್ ಅವರ ದೊಡ್ಡ ಬಾಲಿವುಡ್ ಚಿತ್ರ ಈ ವರ್ಷ ಬಿಡುಗಡೆಯಾದ ವೈಜ್ಞಾನಿಕ ಕಾಲ್ಪನಿಕ ಆಕ್ಷನ್ ಸಿನಿಮಾ ಬಡೆ ಮಿಯಾ ಚೋಟೆ ಮಿಯಾ. ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅಭಿನಯಿಸಿದ ಅಲಿ ಅಬ್ಬಾಸ್ ಜಾಫರ್ ನಿರ್ದೇಶನದಲ್ಲಿ ಪೃಥ್ವಿರಾಜ್ ಮುಖ್ಯ ಪಾತ್ರಧಾರಿಯಾಗಿದ್ದರು.
ಪೃಥ್ವಿರಾಜ್ ಸುಕುಮಾರನ್ ಅವರು ಮುಂಬೈ ಪೊಲೀಸ್, ಮೆಮೊರೀಸ್, ಡ್ರೈವಿಂಗ್ ಲೈಸೆನ್ಸ್, ಅಯ್ಯಪ್ಪನಂ ಕೊಶಿಯುಂ, ಜನ ಗಣ ಮನ, ಮತ್ತು ಆಡುಜೀವಿತಂ ಅಥವಾ ದಿ ಗೋಟ್ ಲೈಫ್ ಸೇರಿದಂತೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಕೆಲವು ಪ್ರಸಿದ್ಧ ವಿಮರ್ಶಾತ್ಮಕ ಮತ್ತು ವಾಣಿಜ್ಯಿಕವಾಗಿ ಮೆಚ್ಚುಗೆ ಪಡೆದ ಚಲನಚಿತ್ರಗಳನ್ನು ನೀಡಿದ್ದಾರೆ. ಅವರು ತೆಲುಗು ಬ್ಲಾಕ್ಬಸ್ಟರ್ ಸಲಾರ್: ಭಾಗ 1 ರಲ್ಲಿ ಪ್ರಭಾಸ್ ಅವರೊಂದಿಗೆ ಕಾಣಿಸಿಕೊಂಡರು.