ತಾವು ಓದುತ್ತಿರುವಂತೆ ನಟಿಸಿ ನಿಮ್ಮನ್ನು ಯಾಮಾರಿಸುವ ಕೆಲಸವನ್ನು ನಿಮ್ಮ ಮಕ್ಕಳು ಎಂದಾದರೂ ಮಾಡಿದ್ದಾರಾ..? ಇಂಥ ಸ್ಮಾರ್ಟ್ ಮಕ್ಕಳಿಗೆಂದೇ ಪರಿಹಾರವೊಂದು ಬಂದಿದ್ದು, ಸರ್ವೇಕ್ಷಣಾ ಕ್ಯಾಮೆರಾ ಅಳವಡಿತ ಸ್ಮಾರ್ಟ್ ಲ್ಯಾಂಪ್ ಮೂಲಕ ಚೀನಾದಲ್ಲಿರುವ ಹೆತ್ತವರು ತಮ್ಮ ಮಕ್ಕಳು ಹೋಂವರ್ಕ್ ಮಾಡುತ್ತಿದ್ದಾರಾ ಎಂದು ಕಣ್ಣಿಡಬಹುದಾಗಿದೆ.
$120 ಬೆಲೆಬಾಳುವ ಡಲಿ ಸ್ಮಾರ್ಟ್‌ಲ್ಯಾಂಪ್‌ನಲ್ಲಿ ಎರಡು ಕ್ಯಾಮೆರಾಗಳಿವೆ – ಒಂದು ಮುಂಬದಿಯಲ್ಲಿದ್ದು ಮತ್ತೊಂದು ಮೇಲುಗಡೆ ಇದೆ. ಈ ಲ್ಯಾಂಪನ್ನು ಹೆತ್ತವರ ಸ್ಮಾರ್ಟ್‌ಫೋನ್‌ಗಳಿಗೆ ಕನೆಕ್ಟ್ ಮಾಡಬಹುದಾಗಿದ್ದು, ತಮ್ಮ ಮಕ್ಕಳು ಹೋಂ ವರ್ಕ್ ಮಾಡುವುದನ್ನು ನೋಡಬಹುದಾಗಿದೆ.
ಈ ಲ್ಯಾಂಪ್‌ನಲ್ಲಿ ಐಫೋನ್‌ನಷ್ಟು ಗಾತ್ರದ ಸ್ಕ್ರೀನ್ ಇದ್ದು, ಅದರ ಮೂಲಕ ಮಕ್ಕಳು ತಮ್ಮ ಹೆತ್ತವರೊಂದಿಗೆ ವಿಡಿಯೋ ಚಾಟ್ ಮಾಡಬಹುದಾಗಿದೆ. ಕೃತಕ ಬುದ್ಧಿಮತ್ತೆಯ ನೆರವಿನಿಂದ ಶಬ್ದಕೋಶ ಹಾಗೂ ಗಣಿತದ ಲೆಕ್ಕಗಳನ್ನು ಪರಿಹರಿಸಲೂ ಈ ಲ್ಯಾಂಪ್ ಸಹಾಯ ಮಾಡಲಿದೆ.
ಇದೇ ಸ್ಮಾರ್ಟ್ ದೀಪದ ಸುಧಾರಿತ ಅವತರಣಿಕೆಯೊಂದು $170ಕ್ಕೆ ಲಭ್ಯವಿದ್ದು, ಮಕ್ಕಳು ಓದುವುದನ್ನು ಬಿಟ್ಟು ಬೇರೆಡೆ ಹೋದ ಕೂಡಲೇ ಫೋಟೋಗಳು ಹಾಗೂ ಚಿತ್ರಗಳನ್ನು ಸೆಂಡ್ ಮಾಡಬಲ್ಲವು. ಅಕ್ಟೋಬರ್ 2020ರಲ್ಲಿ ಈ ಲ್ಯಾಂಪ್ ಬಿಡುಗಡೆಯಾದ ತಿಂಗಳ ಒಳಗೆ 10,000 ಹೆಚ್ಚು ದೀಪಗಳು ಮಾರಾಟವಾಗಿದ್ದವು.