ತಡರಾತ್ರಿಯವರೆಗೂ ಜಾಗರಣೆ ಮಾಡುವುದು, ಸಿನಿಮಾ ನೋಡುವುದು, ಪಾರ್ಟಿ ಮಾಡುವುದು, ಫೋನ್‌ಗೆ ಅಂಟಿಕೊಂಡಿರುವುದು ಇಂತಹ ಟ್ರೆಂಡ್‌ಗಳು ಹೆಚ್ಚಾಗುತ್ತಲೇ ಇವೆ. ಈ ಕಾರಣದಿಂದಾಗಿ ಹೆಚ್ಚಿನ ಜನರು ತಡವಾಗಿ ಮಲಗಲು ಬಯಸುತ್ತಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ ನಾವು ರಾತ್ರಿ ಬೇಗನೆ ಮಲಗಬೇಕು ಮತ್ತು ಬೆಳಗ್ಗೆ ಬೇಗನೆ ಏಳಬೇಕು. ಇದು ಒಟ್ಟಾರೆ ಆರೋಗ್ಯಕ್ಕೆ ಒಳ್ಳೆಯದು. ಮುಂಜಾನೆ ಬೇಗ ಏಳುವುದರಿಂದ ದೇಹ ಮತ್ತು ಮನಸ್ಸಿಗೆ ಅನೇಕ ರೀತಿಯ ಲಾಭಗಳಿವೆ.
ಮಾನಸಿಕ ಆರೋಗ್ಯಕ್ಕೆ ಉತ್ತಮ
ಬೆಳಗ್ಗೆ ಬೇಗನೆ ಏಳುವ ಅಭ್ಯಾಸ ಮಾನಸಿಕ ಆರೋಗ್ಯಕ್ಕೆ ಪ್ರಯೋಜನಕಾರಿ. ಬೆಳಗಿನ ಶಾಂತತೆಯಲ್ಲಿ ಧ್ಯಾನ ಮಾಡುವುದು ಸೂಕ್ತ. ಇದು ಸ್ವಯಂ-ಸಾಕ್ಷಾತ್ಕಾರಕ್ಕೆ ಉತ್ತಮವಾಗಿದೆ. ಇದರಿಂದ ಉದ್ವೇಗ ನಿವಾರಣೆಯಾಗಿ ನಮ್ಮ ಮನಸ್ಥಿತಿ ಸುಧಾರಿಸುತ್ತದೆ.
ವ್ಯಾಯಾಮಕ್ಕೆ ಸಮಯ ಸಿಗುತ್ತದೆ
ತಡವಾಗಿ ಏಳುವುದರಿಂದ ಬೆಳಗಿನ ಎಲ್ಲಾ ಕೆಲಸಗಳಿಗೂ ಗಡಿಬಿಡಿಯಾಗುತ್ತವೆ. ತಕ್ಷಣ ಆಫೀಸಿಗೆ ಅಥವಾ ಇನ್ನಾವುದೇ ಕೆಲಸಕ್ಕೆ ಓಡಲು ನಾವು ಶುರು ಮಾಡುತ್ತೇವೆ. ಬೆಳಗ್ಗೆ ಬೇಗ ಎದ್ದರೆ ವ್ಯಾಯಾಮ ಮಾಡಬಹುದು. ಜಾಗಿಂಗ್, ವಾಕಿಂಗ್, ರನ್ನಿಂಗ್, ಯೋಗಾಸನ ಸೇರಿದಂತೆ ಎಲ್ಲಾ ರೀತಿಯ ವ್ಯಾಯಾಮಗಳಿಗೂ ಸಮಯ ಸಿಗುತ್ತದೆ.
ನಿದ್ರೆಯ ಗುಣಮಟ್ಟ ಉತ್ತಮವಾಗಿರುತ್ತದೆ
ರಾತ್ರಿ ಬೇಗನೆ ನಿದ್ದೆ ಮಾಡುವುದು ಮತ್ತು ಬೆಳಗ್ಗೆ ಬೇಗನೆ ಏಳುವ ಕ್ರಮ ನಮ್ಮ ಸ್ಲೀಪ್ ಸೈಕಲ್ ಅನ್ನು ಸುಧಾರಿಸುತ್ತದೆ. ಇದರಿಂದಾಗಿ ನಿದ್ರೆಯ ಗುಣಮಟ್ಟ ಕೂಡ ಸುಧಾರಣೆಯಾಗುತ್ತದೆ. ನಿಯಮಿತವಾಗಿ ಈ ದಿನಚರಿಯನ್ನು ಅನುಸರಿಸಿದರೆ ಹಗಲು ಹೆಚ್ಚು ಆಯಾಸ ಮತ್ತು ಒತ್ತಡ ಉಂಟಾಗುವುದಿಲ್ಲ.
ರೋಗನಿರೋಧಕ ಶಕ್ತಿ ಹೆಚ್ಚುತ್ತದೆ
ಬೆಳಗ್ಗೆ ಬೇಗನೆ ಎದ್ದು ವಾಕಿಂಗ್ ಮಾಡಬೇಕು. ಬೆಳಗಿನ ಎಳೆ ಬಿಸಿಲು ನಮ್ಮ ದೇಹದ ಮೇಲೆ ಬೀಳುವುದು ಒಳ್ಳೆಯದು. ಈ ನೈಸರ್ಗಿಕ ಬೆಳಕು ನಮ್ಮ ಆಂತರಿಕ ಗಡಿಯಾರವನ್ನು ನಿಯಂತ್ರಿಸುತ್ತದೆ, ಇದರಿಂದಾಗಿ ವಿಟಮಿನ್ ಡಿ ಉತ್ಪಾದನೆಯು ಹೆಚ್ಚಾಗಲು ಪ್ರಾರಂಭಿಸುತ್ತದೆ. ಪರಿಣಾಮ ನಮ್ಮ ರೋಗನಿರೋಧಕ ಶಕ್ತಿಯು ಹೆಚ್ಚಾಗುತ್ತದೆ. ಇದು ವೈರಲ್ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಸಮಯ ನಿರ್ವಹಣೆ ಉತ್ತಮವಾಗಿರುತ್ತದೆ
ಬೇಗನೆ ಎದ್ದರೆ ಇಡೀ ದಿನ ಏನೆಲ್ಲಾ ಮಾಡಬೇಕೆಂಬುದನ್ನು ಸರಿಯಾಗಿ ಪ್ಲಾನ್ ಮಾಡಿಕೊಳ್ಳಬಹುದು. ಬೆಳಗ್ಗೆಯೇ ಕೆಲವು ಪ್ರಮುಖ ಕೆಲಸವನ್ನು ಪೂರ್ಣಗೊಳಿಸಬಹುದು. ಹೀಗೆ ಮಾಡುವುದರಿಂದ ಸಮಯವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಗುತ್ತದೆ.