ಬೆಳಗೆದ್ದು ಒಂದು ಲೋಟ ಕಾಫಿ ಅಥವಾ ಚಹಾ ಕುಡಿಯದ ಹೊರತು ದಿನ ಫ್ರೆಶ್ ಆಗಿ ಆರಂಭವಾಗುವುದಿಲ್ಲ ಎಂದು ಹಲವರು ಹೇಳಿರುವುದನ್ನು ನೀವು ಗಮನಿಸಿರಬಹುದು. ನಿಜಕ್ಕೂ ಇದರಿಂದ ಅವರ ಆರೋಗ್ಯ ಹಾಳಾಗುತ್ತದಷ್ಟೇ.
ಯಾಕೆಂದರೆ ಖಾಲಿ ಹೊಟ್ಟೆಗೆ ಚಹಾ ಕಾಫೀ ಕುಡಿಯುವುದರಿಂದ ಅಡ್ಡ ಪರಿಣಾಮಗಳೇ ಹೆಚ್ಚು. ಅದರ ಬದಲು ಬೆಳಗ್ಗೆ ಎದ್ದಾಕ್ಷಣ ಒಂದು ಲೋಟ ಬೆಚ್ಚಗಿನ ನೀರು ಕುಡಿದರೆ ಮಲಬದ್ಧತೆಯೂ ಉಂಟಾಗದು, ಆರೋಗ್ಯದ ಸಮಸ್ಯೆಯೂ ಕಾಡದು.
ಚಹಾ ಮತ್ತು ಕಾಫಿಯಲ್ಲಿ ಹೆಚ್ಚಾಗಿರುವ ಟ್ಯಾನಿನ್ ಎಂಬ ಅಂಶದಲ್ಲಿ ರಾಸಾಯನಿಕಗಳಿದ್ದು ಇವುಗಳ ನಿತ್ಯ ಸೇವನೆಯಿಂದ ಹಲ್ಲುಗಳ ಬಣ್ಣ ಬದಲಾಗುತ್ತದೆ. ಸಕ್ಕರೆ ಬೆರೆಸಿದ ಈ ಪಾನೀಯಗಳು ಮತ್ತೆ ನಿಮಗೆ ಬಾಯಾರಿಕೆಯಾಗದಂತೆ ಮಾಡುತ್ತವೆ. ಇದರಿಂದ ದೇಹ ಡಿಹೈಡ್ರೇಟ್ ಆಗುವ ಸಾಧ್ಯತೆ ಹೆಚ್ಚು.
ಚಹಾ ಅಥವಾ ಕಾಫಿ ಗ್ಯಾಸ್ಟ್ರಿಕ್ ಸಮಸ್ಯೆ ಉಲ್ಬಣಗೊಳ್ಳುವಂತೆ ಮಾಡುತ್ತದೆ. ಅದೇ ನೀರು ನಿಮ್ಮ ಹೊಟ್ಟೆಯ ಸಮಸ್ಯೆಗಳನ್ನು ದೂರಗೊಳಿಸುತ್ತದೆ. ಹೊಟ್ಟೆಯುರಿಯನ್ನು ಕಡಿಮೆ ಮಾಡುತ್ತದೆ. ಫುಡ್ ಪಾಯ್ಸನ್ ನಂಥ ಸಮಸ್ಯೆಗಳಾಗುವುದನ್ನು ತಡೆಗಟ್ಟಿ ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ.