ಮಧ್ಯಪ್ರದೇಶದ ಶಿಯೋಪುರ್‌ನಲ್ಲಿ ಮದುವೆಯ ದಿನವೇ ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿತ್ತು. ಮಾಜಿ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಪ್ರದೀಪ್ ಅಲಿಯಾಸ್ ಟೋನಿ ಜಾಟ್ ಅವರ ವಿವಾಹವು ಫೆಬ್ರವರಿ 14 ರಂದು ನಿಗದಿಯಾಗಿತ್ತು. ಕುದುರೆಯ ಮೇಲೆ ಕುಳಿತು ವಧುವಿನ ಮನೆಗೆ ತೆರಳುತ್ತಿದ್ದಾಗ, ತೋರಣ ಹೊಡೆಯುವ ಸಿದ್ಧತೆಯಲ್ಲಿರುವಾಗಲೇ ಅವರಿಗೆ ಹೃದಯಾಘಾತವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಹೃದಯವಿದ್ರಾವಕ ಘಟನೆಯ ವಿಡಿಯೋ ಕೂಡ ವೈರಲ್ ಆಗಿದೆ.
ಕುಟುಂಬ ಸದಸ್ಯರು ಟೋನಿ ಜಾಟ್ ಅವರ ಅಂತ್ಯಕ್ರಿಯೆ ನೆರವೇರಿಸಲು ತಮ್ಮ ಸ್ವಗ್ರಾಮ ಸುಸಬಾಡಕ್ಕೆ ತೆರಳಿದ್ದರು. ಈ ಸಂದರ್ಭವನ್ನು ಬಳಸಿಕೊಂಡ ದುಷ್ಕರ್ಮಿಗಳು ಖಾಲಿ ಮನೆಗೆ ನುಗ್ಗಿ ಬೀಗ ಮುರಿದು ಬಟ್ಟೆ ಮತ್ತು ಇತರ ವಸ್ತುಗಳನ್ನು ಕದ್ದೊಯ್ದಿದ್ದಾರೆ. ಕುಟುಂಬಸ್ಥರು ಹಿಂತಿರುಗಿ ಬಂದಾಗ ಮನೆಯಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದವು. ಕೂಡಲೇ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಈ ಘಟನೆಯು ಇಡೀ ಪ್ರದೇಶದಲ್ಲಿ ಶೋಕ ಮೂಡಿಸಿದೆ. ಒಂದೆಡೆ ಮದುವೆಯ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಮಗನ ಸಾವಿನ ಆಘಾತ, ಇನ್ನೊಂದೆಡೆ ಮನೆಯಲ್ಲಿ ಕಳ್ಳತನ. ಈ ದುಃಖಕರ ಘಟನೆಯ ಬಗ್ಗೆ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.