ಇದನ್ನು ಕರ್ಡ್ ಸ್ಯಾಂಡ್ ವಿಚ್ ಅಥವಾ ರಾಯಿತ ಸ್ಯಾಂಡ್ ವಿಚ್ ಅಂತಾನೇ ಕರೆಯುತ್ತಾರೆ. ಆರೋಗ್ಯಕರವಾದ ತಿನಿಸು ಇದು, ಮಕ್ಕಳಿಗೆ ಥಟ್ಟಂತ ಇದನ್ನು ಮಾಡಿಕೊಡಬಹುದು.
ಕ್ರೀಮಿಯಾಗಿರೋ ಸ್ಯಾಂಡ್ ವಿಚ್ ಜೊತೆಗೆ ಒಂದು ಸ್ಲೈಸ್ ಚೀಸ್ ಹಾಕಿದ್ರೆ ಇನ್ನೂ ಟೇಸ್ಟಿಯಾಗಿರುತ್ತೆ. ಮೊಸರಿನ ಸ್ಯಾಂಡ್ ವಿಚ್ ಹೇಗೆ ಮಾಡೋದು ಅಂತಾ ನೋಡೋಣ.
ಬೇಕಾಗುವ ಸಾಮಗ್ರಿ : ಮುಕ್ಕಾಲು ಕಪ್ ಗಟ್ಟಿ ಮೊಸರು, ಕಾಲು ಕಪ್ ಮೊಟ್ಟೆ ರಹಿತ ಮೆಯೋನೀಸ್, ಅರ್ಧ ಚಮಚ ಕರಿಮೆಣಸಿನ ಪುಡಿ, ಸಣ್ಣಗೆ ಹೆಚ್ಚಿದ ಕಾಲು ಕಪ್ ಕ್ಯಾರೆಟ್, ಸಣ್ಣಗೆ ಹೆಚ್ಚಿದ ಕಾಲು ಕಪ್ ಕ್ಯಾಬೇಜ್, ಸಣ್ಣಗೆ ಹೆಚ್ಚಿದ ಕಾಲು ಕಪ್ ಕ್ಯಾಪ್ಸಿಕಂ, ಸಣ್ಣಗೆ ಹೆಚ್ಚಿದ ಅರ್ಧ ಚಮಚ ಶುಂಠಿ, ಕಾಲು ಕಪ್ ಕಾರ್ನ್, 6 ಸ್ಲೈಸ್ ಬ್ರೆಡ್, 2 ಚಮಚ ಬೆಣ್ಣೆ, ಒಂದು ಚಮಚ ಎಳ್ಳು.
ಮಾಡುವ ವಿಧಾನ : ದೊಡ್ಡ ಬೌಲ್ ನಲ್ಲಿ ಮೊಸರು ಹಾಕಿ, ಅದಕ್ಕೆ ಮೆಯೋನೀಸ್ ಸಾಸ್ ಹಾಕಿ. ಕಾಳುಮೆಣಸಿನ ಪುಡಿ ಬೆರೆಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ. ಬಳಿಕ ಹೆಚ್ಚಿದ ಕ್ಯಾರೆಟ್, ಕ್ಯಾಬೇಜ್, ಕ್ಯಾಪ್ಸಿಕಂ ಮತ್ತು ಶುಂಠಿ ಬೆರೆಸಿ. ಚೆನ್ನಾಗಿ ಮಿಕ್ಸ್ ಮಾಡಿ ಇಟ್ಟುಕೊಳ್ಳಿ.
ಬ್ರೆಡ್ ಸ್ಲೈಸ್ ತೆಗೆದುಕೊಂಡು ಅದರ ಮೇಲೆ ನೀವು ತಯಾರಿಸಿದ ಮಿಶ್ರಣವನ್ನು ಚೆನ್ನಾಗಿ ಸವರಿಕೊಳ್ಳಿ. ಮೇಲಿನಿಂದ ಇನ್ನೊಂದು ಬ್ರೆಡ್ ಸ್ಲೈಸ್ ಇಟ್ಟು ಪ್ರೆಸ್ ಮಾಡಿ. ಬಳಿಕ ಒಂದು ಪ್ಯಾನ್ ಅಥವಾ ಸ್ಯಾಂಡ್ ವಿಚ್ ಮೇಕರ್ ತೆಗೆದುಕೊಂಡು ಬೆಣ್ಣೆ ಹಾಕಿ. ಬೆಣ್ಣೆ ಕರಗಿದ ಮೇಲೆ ಬಿಳಿ ಎಳ್ಳು ಹಾಕಿ, ಅದು ಚಟಪಟ ಎನ್ನುತ್ತಿದ್ದಂತೆ ತಯಾರಿಸಿದ ಸ್ಯಾಂಡ್ ವಿಚ್ ಅನ್ನು ತವಾ ಮೇಲೆ ಹಾಕಿ ರೋಸ್ಟ್ ಮಾಡಿ. ಎರಡೂ ಕಡೆ ಹೊಂಬಣ್ಣ ಬರುವವರೆಗೆ ಕರಿಯಿರಿ. ಟೊಮೆಟೋ ಕೆಚಪ್ ಜೊತೆ ಸವಿಯಲು ಮೊಸರಿನ ಸ್ಯಾಂಡ್ ವಿಚ್ ರೆಡಿ.