ರಷ್ಯಾ: ಸಾವು ಎಂದರೆ ಎಲ್ಲರಿಗೂ ಭಯ ಇದ್ದದ್ದೇ. ಎಷ್ಟೇ ವಯಸ್ಸಾದರೂ ಇನ್ನೂ ಸ್ವಲ್ಪ ವರ್ಷ ಬದುಕುವ ಆಸೆ ಬಹುತೇಕ ಮಂದಿಗೆ ಇರುತ್ತದೆ. ಎಲ್ಲರೂ ಒಂದಲ್ಲ ಒಂದು ದಿನ ಸಾಯಲೇಬೇಕು ಎಂಬುದು ಸತ್ಯವಾದರೂ ಸಾವಿನ ಹೆಸರು ಕೇಳಿದರೆ ಹಲವರಿಗೆ ಭಯ ಇರುತ್ತದೆ. ಇದನ್ನು ಒಂದು ರೀತಿಯ ಡೆತ್ ಫೋಬಿಯಾ ಎನ್ನಲಾಗುತ್ತದೆ.
ಈ ಭಯವನ್ನು ಹೋಗಲಾಡಿಸಲು ರಷ್ಯಾದ ಕಂಪೆನಿಯೊಂದು ಹೊಸ ಯೋಜನೆ ರೂಪಿಸಿದೆ. ಪ್ರೆಕೇಟೆಡ್ ಅಕಾಡೆಮಿ ಎಂಬ ರಷ್ಯಾದ ಕಂಪೆನಿಯು ತನ್ನ ಸಿಬ್ಬಂದಿ ಹಾಗೂ ಜನರಿಗೆ ಈ ಭಯದಿಂದ ಹೊರಬರುವ ದಾರಿ ತೋರಿಸುವ ಸಲುವಾಗಿ ಜನರನ್ನು ಒಂದು ಗಂಟೆ ಜೀವಂತವಾಗಿ ಸಮಾಧಿ ಮಾಡಲು ಅವಕಾಶ ಮಾಡಿಕೊಟ್ಟಿದೆ. ಆತಂಕದ ಸಮಸ್ಯೆಗಳನ್ನು ಇದರಿಂದ ನಿಭಾಯಿಸಲು ಸಾಧ್ಯ ಎನ್ನುವುದು ಕಂಪೆನಿಯ ಅಭಿಮತ.
ಸಾವಿನ ಭಯವನ್ನು ನಿವಾರಿಸಿಕೊಳ್ಳಬಯಸುವವರಿಗೆ ಶವಪೆಟ್ಟಿಗೆಯೊಳಗೆ ಇರಿಸಲಾಗುವುದು. ಇದಕ್ಕೆ ಸುಮಾರು 47 ಲಕ್ಷ ರೂಪಾಯಿಗಳ ಶುಲ್ಕವಿದೆ. ಶವಪೆಟ್ಟಿಗೆ ಜತೆ ಭೂಮಿಯೊಳಗೆ ಹೂತುಹಾಕುತ್ತಾರೆ! ಅಸಲಿಗೆ ಇದು ಹೂತು ಹಾಕುವುದಲ್ಲ, ಬದಲಿಗೆ ಹಾಗೆ ನಂಬುವ ‘ಸೈಕಿಕ್ ಥೆರಪಿ’ ಎನ್ನುವ ಒಂದು ಚಿಕಿತ್ಸೆ ಇದು. ಹೀಗೆ ಮಾಡಿದರೆ ಮಾನಸಿಕವಾಗಿ ಮನುಷ್ಯ ಧೈರ್ಯದಿಂದ ಇರುತ್ತಾನೆ, ಸಾವಿನ ಭಯ ಇರುವುದಿಲ್ಲ ಎನ್ನುವುದು ಕಂಪೆನಿಯ ಮಾತು. ಹಲವರು ಈ ಚಿಕಿತ್ಸೆಯ ಮೊರೆ ಹೋಗಿದ್ದು, ತಾವು ಸಾವಿನ ಭಯದಿಂದ ಮುಕ್ತರಾಗಿದ್ದೇವೆ ಎಂದು ಹೇಳುತ್ತಿದ್ದಾರೆ.