
ಐಷಾರಾಮಿ, ಭವ್ಯತೆ ಮತ್ತು ಪ್ರತಿಷ್ಠೆ ಇವು ರೋಲ್ಸ್ ರಾಯ್ಸ್‌ನ ವಿಶಿಷ್ಟ ಲಕ್ಷಣಗಳಾಗಿವೆ. ರೋಲ್ಸ್ ರಾಯ್ಸ್ ಬೋಟ್ ಟೈಲ್ ಪ್ರಸ್ತುತ ವಿಶ್ವದ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿದೆ. ಇದರ ಬೆಲೆ ಅಂದಾಜು 234 ಕೋಟಿ ರೂಪಾಯಿ.
ಸೀಮಿತ ಆವೃತ್ತಿಯ ಕಾರನ್ನು ವಿಶ್ವದಲ್ಲಿ ಕೇವಲ ಮೂವರು ಹೊಂದಿದ್ದಾರೆ. ಬಿಲಿಯನೇರ್ ಮುಖೇಶ್ ಅಂಬಾನಿ, ಅದಾನಿ ಸೇರಿದಂತೆ ರತನ್ ಟಾಟಾ ಬಳಿ ಈ ಕಾರಿಲ್ಲ. ಬಿಲಿಯನೇರ್ ರಾಪರ್ ಜೇ-ಝಡ್ ಮತ್ತು ಅವರ ಪತ್ನಿ ಪಾಪ್ ಐಕಾನ್ ಬೆಯೋನ್ಸ್, ರೋಲ್ಸ್ ರಾಯ್ಸ್ ಬೋಟ್ ಟೈಲ್ ಕಾರನ್ನು ಹೊಂದಿದ್ದಾರೆ. ರೋಲ್ಸ್ ರಾಯ್ಸ್ ಕಾರಿನ ಎರಡನೇ ಮಾಡೆಲ್ ಅರ್ಜೆಂಟೀನಾದ ಫುಟ್ಬಾಲ್ ಆಟಗಾರ ಮೌರೊ ಇಕಾರ್ಡಿ ಅವರ ಒಡೆತನದಲ್ಲಿದೆ. ಇನ್ನೊಬ್ಬರು ವಿಶ್ವದಲ್ಲಿ ಈ ಕಾರನ್ನು ಖರೀದಿ ಮಾಡಿದ್ದು, ಅವರ ಗುರುತನ್ನು ರಹಸ್ಯವಾಗಿಡಲಾಗಿದೆ.
ಈ ಕಾರುಗಳನ್ನು ತಯಾರಿಸಲು ನಾಲ್ಕು ವರ್ಷ ತೆಗೆದುಕೊಳ್ಳಲಾಗಿದೆ. ಗ್ರಾಹಕರಿಗೆ ಅನುಗುಣವಾಗಿ ಕಾರನ್ನು ಕಸ್ಟಮೈಸ್ ಮಾಡಲಾಗಿದೆ. ಕಾರಿನ ಒಳಭಾಗದಲ್ಲಿ ಐಷಾರಾಮಿ ಕಟ್ಲರಿ, ಅತ್ಯುತ್ತಮವಾದ ಬೆಳ್ಳಿಯ ಸಾಮಾನುಗಳು ಮತ್ತು ಷಾಂಪೇನ್ ಇಡಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಎರಡು ರೆಫ್ರಿಜರೇಟರ್ ಗಳಿವೆ. ಈ ಕಾರಿಗೆ ಸುಮಾರು 1,813 ಭಾಗಗಳನ್ನು ಸೇರಿಸಲಾಗಿದೆ.