![](https://kannadadunia.com/wp-content/uploads/2024/05/lychee-on-table-sliced-open-736aa3fbe6c34d54ac20a0c833c29b3f.jpg)
ಬೇಸಿಗೆ ಕಾಲದಲ್ಲಿ ಸಿಗುವ ಕೆಂಪು ಬಣ್ಣದ ರಸಭರಿತ ಲಿಚಿ ಹಣ್ಣುಗಳು ಬಹಳ ರುಚಿಕರ ಹಾಗೂ ಆರೋಗ್ಯಕರವಾಗಿರುತ್ತವೆ. ಇದು ದೇಹದಲ್ಲಿ ಉಷ್ಣ ಉಂಟುಮಾಡುತ್ತದೆ. ಆದರೆ ವಿಟಮಿನ್ ಸಿ, ಫೈಬರ್, ಎಂಟಿಒಕ್ಸಿಡೆಂಟ್‌ಗಳಂತಹ ಜೀವಸತ್ವಗಳು ಮತ್ತು ಪೋಷಕಾಂಶಗಳಿರುವುದರಿಂದ ಬೇಸಿಗೆಯಲ್ಲಿ ಇದನ್ನು ಸೇವಿಸಬಹುದು.
ಆದರೆ ಲಿಚಿ ಹಣ್ಣು ನಮಗೆ ಮಾರಣಾಂತಿಕವೂ ಆಗಬಹುದು. ಲಿಚಿಯಲ್ಲಿ ಮೀಥಿಲೀನ್ ಸೈಕ್ಲೋಪ್ರೊಪಿಲ್-ಗ್ಲೈಸಿನ್ ಎಂಬ ಟಾಕ್ಸಿನ್ ಕಂಡುಬರುತ್ತದೆ. 1995 ರಿಂದಲೂ ಬಿಹಾರದಲ್ಲಿ ಲಿಚಿ ಹಣ್ಣಿನ ಸೇವನೆಯಿಂದ ಮಕ್ಕಳು ಸಾವನ್ನಪ್ಪಿರುವ ಅನೇಕ ಪ್ರಕರಣಗಳು ವರದಿಯಾಗಿವೆ. ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದರಿಂದ ಲಿಚಿಯ ಹಾನಿಯನ್ನು ತಪ್ಪಿಸಬಹುದು.
ಲಿಚಿ ತಿನ್ನುವುದರಿಂದ ಏಕೆ ಸಾವು ಸಂಭವಿಸುತ್ತದೆ?
ಲಿಚಿಯಲ್ಲಿ ಕಂಡುಬರುವ ಮೆಥಿಲೀನ್ ಸೈಕ್ಲೋಪ್ರೊಪಿಲ್-ಗ್ಲೈಸಿನ್ (MCPG) ಎಂಬ ವಿಷವು ಎನ್ಸೆಫಾಲಿಟಿಸ್ ಎಂಬ ಮಾರಣಾಂತಿಕ ರೋಗವನ್ನು ಉಂಟುಮಾಡುತ್ತದೆ. ಎನ್ಸೆಫಾಲಿಟಿಸ್ ಎನ್ನುವುದು ಸೋಂಕಿನಿಂದ ಅಥವಾ ಸ್ವಯಂ ನಿರೋಧಕ ಪ್ರತಿಕ್ರಿಯೆಯಿಂದ ಉಂಟಾಗುವ ಮೆದುಳಿನ ಅಂಗಾಂಶದ ಉರಿಯೂತವಾಗಿದೆ. ಇದರಲ್ಲಿ ಮೆದುಳು ಊದಿಕೊಳ್ಳುತ್ತದೆ. ತಲೆನೋವು, ಕುತ್ತಿಗೆ ಮರಗಟ್ಟುವುದು ಹೀಗೆ ಅನೇಕ ತೊಂದರೆಗಳಾಗುತ್ತವೆ.
ಖಾಲಿ ಹೊಟ್ಟೆಯಲ್ಲಿ ಲಿಚಿ ತಿನ್ನುವುದು ಅಪಾಯಕಾರಿ!
ಲಿಚಿ ಹಣ್ಣುಗಳನ್ನು ಅಪ್ಪಿತಪ್ಪಿಯೂ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಅತಿಯಾದ ಸೇವನೆ ಕೂಡ ಅಪಾಯಕಾರಿ. ಹೀಗೆ ಮಾಡುವುದರಿಂದ ಈ ಹಣ್ಣಿನಲ್ಲಿರುವ ವಿಷಕಾರಿ ಅಂಶದಿಂದಾಗಿ ದೇಹದ ಸಕ್ಕರೆಯ ಪ್ರಮಾಣವು ಶೀಘ್ರವಾಗಿ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಹಣ್ಣುಗಳನ್ನು ಸೇವನೆ ಮಾಡಿದವರಲ್ಲಿ ವಾಂತಿ, ಮೂರ್ಛೆ ರೋಗ ಕಾಣಿಸಿಕೊಳ್ಳಬಹುದು. ಕೋಮಾಗೆ ಹೋಗುವ ಸಾಧ್ಯತೆ ಮತ್ತು ಸಾವಿನ ಅಪಾಯವೂ ಇದೆ.
ದಿನಕ್ಕೆ ಎಷ್ಟು ಲಿಚಿ ತಿನ್ನಬೇಕು?
ದಿನಕ್ಕೆ 6-7 ಲಿಚಿ ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಯಾವುದಾದರೂ ಕಾಯಿಲೆಗೆ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ ಲಿಚಿ ತಿನ್ನುವ ಮೊದಲು ವೈದ್ಯರನ್ನು ಸಂಪರ್ಕಿಸಿ.
ಲಿಚಿಯ ಹಾನಿಯನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ಅದನ್ನು ನಿಯಂತ್ರಿತ ಪ್ರಮಾಣದಲ್ಲಿ ತಿನ್ನುವುದು. ಅಷ್ಟೇ ಅಲ್ಲ ಸಂಪೂರ್ಣವಾಗಿ ಮಾಗಿದ ಹಣ್ಣುಗಳನ್ನು ಮಾತ್ರ ತಿನ್ನಬೇಕು. ಉಪವಾಸದ ಸಮಯದಲ್ಲಿ ಅಥವಾ ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ಸೇವಿಸಬೇಡಿ.