ನಾವು ಆರೋಗ್ಯವಾಗಿರಬೇಕಂದ್ರೆ ದಿನಕ್ಕೆ 7-8 ತಾಸು ನಿದ್ರೆ ಅತ್ಯಂತ ಅವಶ್ಯ. ಆದ್ರೆ ಎಷ್ಟೋ ಬಾರಿ ನಾವು ಕಣ್ತುಂಬಾ ನಿದ್ದೆ ಮಾಡಲು ಸಮಯ ಸಿಗುವುದಿಲ್ಲ. ಒತ್ತಡದ ಜೀವನಶೈಲಿಯೇ ಅದಕ್ಕೆ ಕಾರಣವಿರಬಹುದು.
ರಾತ್ರಿಯ ಅಮೂಲ್ಯ ನಿದ್ರೆಯನ್ನು ನೀವು ಮಾಡದೇ ಇದ್ರೆ ಮರುದಿನ ಆಯಾಸ, ಆಲಸ್ಯ ಕಾಣಿಸಿಕೊಳ್ಳುವುದು ಸಹಜ. ದೀರ್ಘ ಕಾಲದವರೆಗೆ ಇದೇ ರೀತಿ ಮುಂದುವರಿದರೆ ನಿದ್ರೆಯ ಕೊರತೆಯಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಿಮ್ಮ ಮನಸ್ಸು ಮತ್ತು ದೇಹ ಘಾಸಿಗೊಳ್ಳುತ್ತದೆ.
ಹೃದಯ ರಕ್ತನಾಳದ ಆರೋಗ್ಯ : ನಿದ್ದೆಯ ಸಮಸ್ಯೆ ಇರುವವರಿಗೆ ಹೃದಯದ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಅಧಿಕ ರಕ್ತದೊತ್ತಡ ಮತ್ತು ಹೃದಯಾಘಾತಕ್ಕೂ ಇದು ಕಾರಣವಾಗಬಹುದು. ಯಾಕಂದ್ರೆ ನಿಮ್ಮ ರಕ್ತನಾಳಗಳು ಮತ್ತು ಹೃದಯದ ದುರಸ್ತಿಯಲ್ಲಿ ನಿದ್ರೆ ಬಹುಮುಖ್ಯ ಪಾತ್ರ ವಹಿಸುತ್ತದೆ.
ಡಯಾಬಿಟಿಸ್ : ಯಾರು 5 ಗಂಟೆಗಿಂತಲೂ ಕಡಿಮೆ ನಿದ್ದೆ ಮಾಡ್ತಾರೋ ಅವರಿಗೆ ಸಕ್ಕರೆ ಖಾಯಿಲೆ ಬರುವ ಸಾಧ್ಯತೆಗಳು ಹೆಚ್ಚು. ಸಂಶೋಧನೆಯಲ್ಲೂ ಇದು ದೃಢಪಟ್ಟಿದೆ.
ಉಸಿರಾಟ ಸಮಸ್ಯೆ : ನಿದ್ದೆಯ ಅಭಾವ ನಿಮ್ಮ ರೋಗ ನಿರೋಧಕ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ. ನೆಗಡಿ, ಫ್ಲೂನಂತಹ ಉಸಿರಾಟ ಸಮಸ್ಯೆಗಳಿಗೆ ನೀವು ತುತ್ತಾಗಬಹುದು. ದೀರ್ಘಕಾಲೀನ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನಿದ್ದೆಯ ಕೊರತೆಯಿಂದ ಸಮಸ್ಯೆ ಇನ್ನಷ್ಟು ಹೆಚ್ಚಾಗಲಿದೆ.
ಮಾನಸಿಕ ಆರೋಗ್ಯ : ದೀರ್ಘಕಾಲದ ನಿದ್ರಾಭಂಗ ಖಿನ್ನತೆ ಮತ್ತು ಆತಂಕದಂತಹ ಭಾವನಾತ್ಮಕ ಖಾಯಿಲೆಗಳಿಗೆ ಕಾರಣವಾಗಬಹುದು. ಮಾನಸಿಕ ಅಸ್ವಸ್ಥತೆ ಇರುವವರಲ್ಲಿ ನಿದ್ರಾಹೀನತೆ ಕಂಡುಬಂದಿದೆ.
ತೂಕ ಹೆಚ್ಚಳ : ನಿದ್ರೆಯ ಕೊರತೆಯಿಂದ ಹೆಚ್ಚು ಕ್ಯಾಲೋರಿ ನಿಮ್ಮ ದೇಹ ಸೇರುತ್ತದೆ, ಇದರಿಂದ ತೂಕ ಹೆಚ್ಚಾಗುತ್ತದೆ. ಯುರೋಪಿಯನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಶನ್ ಅಧ್ಯಯನದ ಪ್ರಕಾರ ಯಾರು ಸರಿಯಾಗಿ ನಿದ್ದೆ ಮಾಡುವುದಿಲ್ಲವೋ ಅವರು ಮರುದಿನ ಹೆಚ್ಚುವರಿಯಾಗಿ 385 ಕ್ಯಾಲೋರಿ ಪಡೆಯುತ್ತಾರೆ.