ಭಾರತದಲ್ಲಿ ಯುವಕರಿಗೆ ಹೋಲಿಸಿದ್ರೆ ಯುವತಿಯರ ಸಂಖ್ಯೆ ಬಹಳ ಕಡಿಮೆಯಿದೆ ಅನ್ನೋದು ಗಣತಿಯಲ್ಲಿ ಬಹಿರಂಗವಾಗಿದೆ. ಹಾಗಾಗಿಯೇ ಅನೇಕರು ಮದುವೆಯೇ ಇಲ್ಲದೆ ಕಂಗಾಲಾಗಿದ್ದಾರೆ. ಅದೇ ಸ್ಥಿತಿ ಪಾಕಿಸ್ತಾನದಲ್ಲೂ ಇದೆ. ಉತ್ತಮ ಸಂಬಂಧವೇ ಸಿಗುತ್ತಿಲ್ಲ ಅನ್ನೋದು ಯುವಕರ ಕೊರಗು. ಉತ್ತಮ ಜೀವನ ಸಂಗಾತಿ ಸಿಗುವ ನಿರೀಕ್ಷೆಯಲ್ಲಿ ವಿಶಿಷ್ಟ ಉಪ್ಪಿನಕಾಯಿಯನ್ನು ಸವಿಯುತ್ತಿದ್ದಾರಂತೆ. ಕಂಕಣ ಬಲ ತಂದುಕೊಡುವ ಈ ಉಪ್ಪಿನಕಾಯಿ ತಿನ್ನಲು ಕರಾಚಿಯ ಹೈದರಾಬಾದ್ ಕಾಲೋನಿಗೆ ಸಾಕಷ್ಟು ಮಂದಿ ಬರುತ್ತಾರೆ.
ಈ ಪ್ರಸಿದ್ಧ ವಸಾಹತು, ನಗರದ ಅತ್ಯಂತ ಹಳೆಯ ಪ್ರದೇಶಗಳಲ್ಲಿ ಒಂದಾಗಿದೆ. ಈ ಕಾಲೋನಿ ಸ್ಟ್ರೀಟ್ ಫುಡ್‌ಗೆ ಹೆಸರುವಾಸಿ. ಇಲ್ಲಿ 48 ವರ್ಷದ ತಾಹಿರ್ ಕಲೀಮ್ ಕುಟುಂಬವು 73 ವರ್ಷಗಳಿಂದ ಉಪ್ಪಿನಕಾಯಿ ವ್ಯಾಪಾರವನ್ನು ಮಾಡುತ್ತಿದೆ. ತಾಹಿರ್ ಕಂಕಣ ಬಲ ಕೂಡಿಬರಲೆಂದೇ ವಿಶೇಷ ಉಪ್ಪಿನಕಾಯಿಯನ್ನು ಗ್ರಾಹಕರಿಗೆ ಕೊಡುತ್ತಾರಂತೆ. ಈ ವಿಶೇಷ ಉಪ್ಪಿನಕಾಯಿಯನ್ನು ತಿಂದರೆ ಒಳ್ಳೆ ಹುಡುಗಿ ಜೊತೆ ಮದುವೆ ಸೆಟ್ಟೇರುತ್ತದೆ ಅನ್ನೋದು ಅವರ ವಾದ. ಅವರನ್ನು ‘ಚೆಫ್ ತಾಹಿರ್’ ಎಂದೇ ಕರೆಯಲಾಗುತ್ತದೆ.’ಡೆಕ್ಕನ್ ಪಿಕಲ್ ಹೌಸ್’ ಎಂಬ ಮಳಿಗೆಯಲ್ಲಿ ಅವರು ಉಪ್ಪಿನಕಾಯಿ ಮಾರುತ್ತಾರೆ.
ಈ ಅಂಗಡಿಯನ್ನು 1950 ರಲ್ಲಿ ತೆರೆಯಲಾಯಿತು. ತಾಹಿರ್ ಅವರ ‘ರಿಶ್ತಾ ಕಾ ಆಚಾರ್’ ನಗರದಲ್ಲಿ ಫೇಮಸ್ ಆಗಿದೆ. ಉತ್ತಮ ಜೀವನ ಸಂಗಾತಿಯನ್ನು ಹುಡುಕುತ್ತಿರುವ ಜನರು ಈ ಅಂಗಡಿಯತ್ತ ವಿಶೇಷವಾಗಿ ಆಕರ್ಷಿತರಾಗ್ತಿದ್ದಾರೆ. ತಾಹಿರ್ ಅವರ ಅಜ್ಜಿ ಕುಟುಂಬದೊಂದಿಗೆ ಭಾರತದ ಹೈದರಾಬಾದ್‌ನಿಂದ ಕರಾಚಿಗೆ ಬಂದು ಇಲ್ಲಿ ಉಪ್ಪಿನಕಾಯಿ ಅಂಗಡಿಯನ್ನು ತೆರೆದಿದ್ದರು. ಅವರ ‘ರಿಶ್ತಾ ಕಾ ಆಚಾರ್’ ಭಾರತದಲ್ಲೂ ಪ್ರಸಿದ್ಧವಾಗಿದೆ. ಅನೇಕ ಹೈದರಾಬಾದಿ ವೇದಿಕೆ ಮತ್ತು ದೂರದರ್ಶನ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದೆ.
ತಾಹಿರ್ ಸೋದರ ಸಂಬಂಧಿಯೊಬ್ಬನಿಗೆ ಮದುವೆಗೆ ಸೂಕ್ತವಾದ ವಧು ಸಿಗಲಿಲ್ಲ. ತಾಹಿರ್ ಉಣಬಡಿಸಿದ ಉಪ್ಪಿನಕಾಯಿ ತಿಂದು ಒಂದೇ ತಿಂಗಳಲ್ಲಿ ಆತನಿಗೆ ಮದುವೆಯಾಯ್ತು. ಅಂದಿನಿಂದಲೂ ಈ ಉಪ್ಪಿನಕಾಯಿ ಮತ್ತಷ್ಟು ಫೇಮಸ್ ಆಗಿದೆ. ಮದುವೆಯ ಎಲ್ಲ ಪ್ರಯತ್ನ ವಿಫಲವಾದಾಗ ಈ ಅಂಗಡಿಯಿಂದ ಒಂದು ಬಾಟಲಿ ಉಪ್ಪಿನಕಾಯಿ ಖರೀದಿಸಿ ಅದನ್ನು ಸೇವಿಸಬೇಕು ಅನ್ನೋದು ತಾಹಿರ್ ಅಭಿಪ್ರಾಯ. ಒಟ್ನಲ್ಲಿ ಈ ಉಪ್ಪಿನಕಾಯಿ ಮದುವೆ ಭಾಗ್ಯ ಕರುಣಿಸುತ್ತದೆ ಅನ್ನೋದೇ ವಿಶೇಷ ಸಂಗತಿ.