ಆಧುನೀಕರಣ, ನಗರೀಕರಣವಾದಂತೆ ನಮ್ಮ ಶ್ರೀಮಂತ ಪರಂಪರೆ, ಸಂಪ್ರದಾಯಗಳು ಕಣ್ಮರೆಯಾಗುತ್ತಾ ಹೋಗುತ್ತವೆ. ಕೊಳಾಯಿಗಳು ಬಂದು ಬಾವಿಯಲ್ಲಿ ನೀರು ಸೇದುವ ಪದ್ಧತಿ ನಿಂತು ಹೋಯಿತು, ಟಿವಿಗಳು ಬಂದು ರೇಡಿಯೋ ಕೇಳುವವರ ಸಂಖ್ಯೆ ಇಳಿಮುಖವಾಯಿತು, ಮೊಬೈಲ್ ಗಳು ಬಂದು ಲ್ಯಾಂಡ್ ಲೈನ್ ಫೋನ್ ಬಳಸುವವರ ಪ್ರಮಾಣ ಕಡಿಮೆಯಾಯಿತು.
ಅದೇ ರೀತಿ, ಅಡುಗೆ ಅನಿಲ ಬಂದು ಸಾಂಪ್ರಾದಾಯಿಕವಾದ ಮಣ್ಣಿನ ಒಲೆಗಳು ನೆನಪಿನಲ್ಲಿ ಮಾತ್ರ ಉಳಿಯುವಂತಾಗಿದೆ. ಈಗಲೂ ಗ್ರಾಮೀಣ ಭಾರತದ ಅದೆಷ್ಟೋ ಮನೆಗಳಲ್ಲಿ ಈ ಸಾಂಪ್ರದಾಯಿಕ ಮಣ್ಣಿನ ಒಲೆಗಳನ್ನು ಕಾಣುತ್ತೇವೆ. ಆದರೆ, ನಗರ ಪ್ರದೇಶಗಳಲ್ಲಿ ಬೆರಳೆಣಿಕೆಯಷ್ಟು ಮನೆಗಳಲ್ಲಿ ಒಲೆಗಳು ಕಾಣಬಹುದು.
ಇಂತಹದ್ದೊಂದು ಮಣ್ಣಿನ ಒಲೆಯ ಚಿತ್ರವನ್ನು ಮಹಾಕವಿ ದಿನಕರ್ ಎಂಬುವರು ಟ್ವಿಟರ್ ನಲ್ಲಿ ಪೋಸ್ಟ್ ಮಾಡುವ ಮೂಲಕ ನಮ್ಮ ಸಂಪ್ರದಾಯ ಹೀಗಿತ್ತು ಎಂಬುದನ್ನು ನಗರ ಪ್ರದೇಶದ ಜನರಿಗೆ ತೋರಿಸಿಕೊಟ್ಟಿದ್ದಾರೆ. ಇದನ್ನು ವೀಕ್ಷಿಸಿದ ನೆಟ್ಟಿಗರು, ಹೌದು ನಮ್ಮ ಸಾಂಪ್ರದಾಯಿಕವಾದ ಒಲೆ ಇನ್ನು ನೆನಪು ಮಾತ್ರ ಎಂದು ಹೇಳಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಕೋಣೆಯೊಂದರಲ್ಲಿ ಮಣ್ಣಿನ ಒಲೆ ಮತ್ತು ಅದರ ಎದುರೊಂದು ಸಣ್ಣದಾದ ಮರದ ಸ್ಟೂಲ್ ಇದೆ. ಉರಿಯುತ್ತಿರುವ ಒಲೆಯ ಮೇಲೆ ಬಾಣಲೆಯನ್ನಿಟ್ಟು ರುಚಿಕಟ್ಟಾದ ಖಾದ್ಯವನ್ನು ತಯಾರಿಸಲಾಗುತ್ತಿದೆ. ಇದಕ್ಕೆ ದಿನಕರ್ ಅವರು ನೀಡಿರುವ ಶೀರ್ಷಿಕೆ:- ನಾನು ಹುಟ್ಟಿ ಬೆಳೆದ ಗ್ರಾಮದ ಈ ಸೊಬಗಿನ ಮುಂದೆ ಲಂಡನ್, ಮಾಸ್ಕೋ ಏನೇನೂ ಅಲ್ಲ ಎಂದಿದ್ದಾರೆ.
ಇದಕ್ಕೆ ದನಿಗೂಡಿಸಿರುವ ನೆಟ್ಟಿಗರೊಬ್ಬರು, ಇತ್ತೀಚಿನ ದಿನಗಳಲ್ಲಿ ನಾನು ಇಂತಹ ಮನೆಯಲ್ಲಿ ಕಂಡೇ ಇಲ್ಲ. ನಾನು ನನ್ನ ಹಳೆಯ ಹಳ್ಳಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದರೆ, ಮತ್ತೋರ್ವ ನೆಟ್ಟಿಗ ಇದು `ಶುದ್ಧ ಚಿನ್ನ’ ಎಂದು ಉದ್ಘರಿಸಿದ್ದಾರೆ.