ಯಾವುದೋ ಒಂದು ಸಂದರ್ಭದಲ್ಲಿ ತಿಳಿದೋ ತಿಳಿಯದೆಯೋ ಕೆಟ್ಟಚಟಗಳಿಗೆ ದಾಸರಾಗಿಬಿಟ್ಟರೆ ಅದರಿಂದ ಹೊರಕ್ಕೆ ಬರುವುದು ಬಲುಕಷ್ಟ. ಆದರೆ ಡ್ರಗ್ಸ್ ಚಟದಿಂದ ಹೊರಕ್ಕೆ ಬಂದು ಪ್ರತಿ ತಿಂಗಳು ಸರಿಸುಮಾರು 1.5 ಕೋಟಿ ರೂ. ಆದಾಯ ಗಳಿಸುತ್ತಿದ್ದಾಳೆ ಈ ರೂಪದರ್ಶಿ !
ಈಕೆಯ ಹೆಸರು ಎಲಿಜಾ ರೋಸ್ ವ್ಯಾಟ್ಸನ್. ದುಡ್ಡು ಸಂಪಾದಿಸಿ ಇಡೀ ಕುಟುಂಬವನ್ನು ನೋಡಿಕೊಳ್ಳುವ 33 ವರ್ಷದ ಈಕೆ ಒಮ್ಮೆ ಡ್ರಗ್ಸ್ ಚಟಕ್ಕೆ ಬಿದ್ದು, ತಾಯಿಯ ಹಣವನ್ನೇ ಕದ್ದೊಯ್ಯುತ್ತಿದ್ದಳು. ಎಲಿಜಾ 17 ನೇ ವಯಸ್ಸಿನಲ್ಲಿ ಮಾಡೆಲ್ ಆದಳು. ಈ ಬಣ್ಣದ ಲೋಕ ಅವಳಿಗೆ ಕೊಟ್ಟಿದ್ದು ಮಾದಕದ್ರವ್ಯಗಳ ವ್ಯಸನ. ಇದೇ ಕಾರಣಕ್ಕೆ ಕಾಲೇಜನ್ನೂ ಬಿಟ್ಟಳು. 22 ನೇ ವಯಸ್ಸಿಗೆ ಅವಳ ಚಟವು ನಿಯಂತ್ರಣ ಮೀರಿತು. ಇದರಿಂದಾಗಿ ಆಕೆಗೆ ಎಲ್ಲಿಯೂ ಉದ್ಯೋಗ ಸಿಗಲಿಲ್ಲ.
ಕೈಯಲ್ಲಿ ದುಡ್ಡು ಇಲ್ಲದಾಗ ತಾಯಿಯಿಂದ ಕದಿಯಲು ಪ್ರಾರಂಭಿಸಿದಳು. ಡ್ರಗ್ಸ್ ಸೇವನೆ ಜಾಸ್ತಿಯಾಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ನಂತರ ಆಕೆಯ ಜೀವನವೇ ಬದಲಾಯಿತು. ಡ್ರಗ್ಸ್ ತನ್ನ ಜೀವನವನ್ನು ಹಾಳುಮಾಡುತ್ತಿದೆ ಎಂಬ ಅರಿವು 28 ನೇ ವಯಸ್ಸಿನಲ್ಲಿ ಎಲಿಜಾಳನ್ನು ಮುಟ್ಟಿತು. ಅಲ್ಲಿಂದ ಕಷ್ಟಪಟ್ಟು ಅದನ್ನು ತ್ಯಜಿಸಲು ಸರ್ವರೀತಿಯ ಪ್ರಯತ್ನ ಪಟ್ಟು ಯಶಸ್ವಿಯೂ ಆದಳು.
ನಂತರ ಓನ್ಲಿ ಫ್ಯಾನ್ಸ್ ಎಂಬ ಖಾತೆಯನ್ನು ತೆರೆದಳು, ನಂತರ ಅದು ಪೂರ್ಣ ಸಮಯದ ಉದ್ಯೋಗವಾಯಿತು. ಇದರಲ್ಲಿ ತನ್ನ ಬದುಕಿನ ಮಜಲುಗಳನ್ನು ಆಕೆ ಹಂಚಿಕೊಂಡಳು. ತಾನು ವ್ಯಸನಮುಕ್ತವಾದ ಬಗ್ಗೆ ವಿವರಿಸತೊಡಗಿದಳು. ನಂತರ ತನ್ನಂತೆಯೇ ವ್ಯಸನಿಗಳಾದವರಿಗೆ ಅದರಿಂದ ಹೊರಬರುವ ದಾರಿ ಹೇಳತೊಡಗಿದಳು.
ಈ ವೇದಿಕೆಯಿಂದ ಈಗ ಕೋಟಿ ಕೋಟಿ ರೂಪಾಯಿ ಗಳಿಸುತ್ತಿದ್ದಾಳೆ ಈ ರೂಪದರ್ಶಿ. ಇವಳಿಗೆ ಬಹುದೊಡ್ಡ ಫ್ಯಾನ್ಸ್ ಇದ್ದು, ಈಕೆಯ ಬರಹಗಳಿಗಾಗಿ ಕಾಯುತ್ತಿರುತ್ತಾರೆ, ತಮ್ಮ ಸಮಸ್ಯೆ ಹೇಳಿಕೊಂಡು ವ್ಯಸನಮುಕ್ತರಾಗಲು ಹಾತೊರೆಯುತ್ತಿದ್ದಾರೆ.