ತುಟಿಗಳು ಒಣಗಿದ್ದು, ನಿರ್ಜೀವವಾಗಿ ಕಂಡು ಬರುವ ಸಮಸ್ಯೆ ಬಹಳಷ್ಟು ಜನರನ್ನು ಕಾಡುತ್ತಿರುತ್ತದೆ. ಇದನ್ನು ದೂರ ಮಾಡಲು ಲಿಪ್ ಸ್ಟಿಕ್ ಹಾಕಿಕೊಳ್ಳುವುದು ಸೂಕ್ತ ಪರಿಹಾರವಲ್ಲ. ತುಟಿಗಳಿಗೆ ಆಗಾಗ ಈ ಸಣ್ಣಪುಟ್ಟ ಪ್ಯಾಕ್‌ಗಳನ್ನು ಹಾಕಿಕೊಳ್ಳಬೇಕು.
ಗುಲಾಬಿ ಜಲ
ಗುಲಾಬಿ ಜಲವು ಚರ್ಮಕ್ಕೆ ಆಹ್ಲಾದ ನೀಡಿ ಮೃದುವಾಗಿ ಮಾರ್ಪಾಡು ಮಾಡುತ್ತದೆ. ಈ ನೀರು ನೈಜವಾಗಿಯೇ ತುಟಿಗಳಿಗೆ ತಿಳಿ ಗುಲಾಬಿ ಬಣ್ಣವನ್ನು ನೀಡುತ್ತದೆ. ಕೆಲವು ಹನಿಗಳಷ್ಟು ಗುಲಾಬಿ ಜಲ, ಸ್ವಲ್ಪ ಜೇನು ಬೆರಸಿ ತುಟಿಗಳಿಗೆ ಹಚ್ಚಿ. ಪ್ರತಿದಿನ ಈ ರೀತಿ ಮಾಡಿದರೆ ತುಂಬಾ ಕಡಿಮೆ ಅವಧಿಯಲ್ಲಿ ಬದಲಾವಣೆ ಕಂಡು ಬರುತ್ತದೆ.
ಬೀಟ್‌ರೂಟ್
ಇದು ತುಟಿಗಳ ಮೇಲಿರುವ ಕಲೆಗಳನ್ನು ದೂರ ಮಾಡುತ್ತದೆ. ತಾಜ ಬೀಟ್ ರೂಟ್ ರಸವನ್ನು ರಾತ್ರಿ ಹಚ್ಚಿ ಮುಂಜಾನೆ ತೊಳೆಯಬೇಕು. ಈ ರೀತಿ ತಪ್ಪದೇ ಮಾಡಿದರೆ ತುಟಿ ತಿಳಿಗೆಂಪು ಬಣ್ಣವನ್ನು ತನ್ನದಾಗಿಸಿಕೊಳ್ಳುತ್ತದೆ.
ದಾಳಿಂಬೆ
ಈ ಬೀಜಗಳ ರಸವನ್ನು ಒಣಗಿದ ತುಟಿಗೆ ಹಚ್ಚಿದರೆ ಪೋಷಣೆ ಜೊತೆಗೆ ತೇವದಿಂದ ಕೂಡಿರುತ್ತದೆ. ಒಂದು ದೊಡ್ಡ ಚಮಚದಷ್ಟು ದಾಳಿಂಬೆ ರಸ, ಕೆನೆ, ಗುಲಾಬಿ ನೀರು ಎಲ್ಲವನ್ನು ಮಿಶ್ರ ಮಾಡಬೇಕು. ತುಟಿಗೆ ಹಚ್ಚಿ ಕೆಲವು ನಿಮಿಷಗಳ ಕಾಲ ಮೃದುವಾಗಿ ಮರ್ದನ ಮಾಡಬೇಕು. ಸ್ವಲ್ಪ ಸಮಯದ ಬಳಿಕ ಉಗುರು ಬೆಚ್ಚಗಿರುವ ನೀರಿನಿಂದ ಸ್ವಚ್ಛಗೊಳಿಸಬೇಕು.
ಸೌತೆಕಾಯಿ
ಪ್ರತಿದಿನ ಸೌತೆಕಾಯಿ ಚೂರುಗಳಿಂದ ತುಟಿಗಳನ್ನು ಮೃದುವಾಗಿ ಉಜ್ಜಬೇಕು. ಆಗ ಅದರ ರಸವನ್ನು ತುಟಿಯು ಹೀರುತ್ತದೆ. ಈ ರೀತಿ ಪ್ರತಿದಿನ ಐದು ನಿಮಿಷ ಮಾಡಿದರೆ ಉತ್ತಮ ಫಲಿತಾಂಶ ಪಡೆಯಬಹುದು.
ಬಾದಾಮಿ ಎಣ್ಣೆ
ತುಟಿಯು ಕಪ್ಪಗಿದ್ದವರು, ಮೃದುವಾಗಿ ಬದಲಾಗಬೇಕೆಂದರೆ ಬಾದಾಮಿ ಎಣ್ಣೆಯನ್ನು ಬಳಸುವುದು ಉತ್ತಮ. ಒಂದು ದೊಡ್ಡ ಚಮಚ ಜೇನಿನಲ್ಲಿ ಐದಾರು ಹನಿಗಳಷ್ಟು ಬಾದಾಮಿ ಎಣ್ಣೆಯನ್ನು ಬೆರಸಿ ತುಟಿಗಳಿಗೆ ಹಚ್ಚಿ ಮೃದುವಾಗಿ ಮರ್ದನ ಮಾಡಬೇಕು. ಹೀಗೆ ಆಗಾಗ ಮಾಡುವುದರಿಂದ ಪೋಷಣೆ ದೊರಕುವುದಲ್ಲದೆ ಹೊಳಪಿನ ಬಣ್ಣವು ನಿಮ್ಮದಾಗುತ್ತದೆ.