ಚಳಿಗಾಲದಲ್ಲಿ ಅಸ್ತಮಾ ಇರುವವರಂತೂ ಎಷ್ಟು ಎಚ್ಚರ ವಹಿಸಿದರೂ ಸಾಲದು. ಶ್ವಾಸಕೋಶಕ್ಕೆ ಹಾನಿಯಾಗಿ ಕಫ ಕಟ್ಟುವ ಸಾಧ್ಯತೆ ಬಹಳ ಹೆಚ್ಚು. ಇದರ ನಿವಾರಣೆಗೆ ಮನೆಮದ್ದುಗಳನ್ನು ಮಾಡಬಹುದು.
ಚಳಿಗಾಲದಲ್ಲಿ ಹೊರಗೆ ಹೋಗುವ ಅನಿವಾರ್ಯತೆ ಇದ್ದರೆ ಸ್ವೆಟರ್, ಟೊಪ್ಪಿ ಹಾಗೂ ಮಾಸ್ಕ್ ಧರಿಸಿ. ವಾತಾವರಣದ ಮಾಲಿನ್ಯ ನಿಮ್ಮ ಶ್ವಾಸಕೋಶವನ್ನು ಬಹುಬೇಗ ಹಾಳು ಮಾಡಬಹುದು. ಅತಿಯಾದ ಚಳಿಗೆ ಸೈಕ್ಲಿಂಗ್, ಓಟ, ವಾಕಿಂಗ್ ನಿಂದ ದೂರವಿರಿ. ಚಳಿ ಕಡಿಮೆಯಾಗುವ ತನಕ ಒಳಾಂಗಣ ವ್ಯಾಯಾಮಗಳನ್ನು ಮಾತ್ರ ಮಾಡಿ.
ಧೂಮಪಾನದಿಂದ ದೂರವಿರಿ. ಹೋಮ, ಬಿಸಿನೀರ ಹೊಗೆಗಳಿಂದ ದೂರವಿರಿ. ಇವು ನೇರವಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತವೆ. ಧೂಪದ ಹೊಗೆಯೂ ಅಲರ್ಜಿಗೆ ಕಾರಣವಾಗಬಹುದು.
ಹೆಚ್ಚಿನ ಅಸ್ತಮಾ ಇದ್ದವರು ನಿಮ್ಮೊಂದಿಗೆ ಸದಾ ಇನ್ ಹೇಲರ್ ಇಟ್ಟುಕೊಳ್ಳಿ. ಈ ಔಷಧ ನಿಮ್ಮ ಸಮಸ್ಯೆಯನ್ನು ಬಹುಬೇಗ ನಿವಾರಿಸುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಿಸುವ ವಿಟಮಿನ್ ಭರಿತ ಆಹಾರವನ್ನು ಸೇವಿಸಿ. ತರಕಾರಿ ಹಣ್ಣುಗಳಿಗೆ ಮೊದಲ ಆದ್ಯತೆ ನೀಡಿ. ಶುಂಠಿ, ತುಳಸಿ ಚಹಾ ತಯಾರಿಸಿ ಕುಡಿಯಿರಿ.