ನೀವು ಪ್ರತಿದಿನ ರಾತ್ರಿ ಚೆನ್ನಾಗಿ ನಿದ್ದೆ ಮಾಡ್ತೀರಾ? ಇಲ್ಲ ಅಂತಾದ್ರೆ ನೀವು ಈ ಸುದ್ದಿಯನ್ನು ಓದಲೇಬೇಕು. ನಿದ್ರಾಹೀನತೆಯಿಂದ ನಿಮ್ಮ ತೂಕ ಹೆಚ್ಚಾಗುತ್ತದೆ. ಮಾತ್ರವಲ್ಲ ಸಕ್ಕರೆ ಖಾಯಿಲೆ ಕೂಡ ಬರುವ ಸಾಧ್ಯತೆಗಳು ಹೆಚ್ಚು. ಹೊಸದೊಂದು ಸಂಶೋಧನೆಯಲ್ಲಿ ಇದು ದೃಢಪಟ್ಟಿದೆ.
ಯಾರು ಕೇವಲ 6 ಗಂಟೆ ನಿದ್ದೆ ಮಾಡ್ತಾರೋ ಅವರ ಹೊಟ್ಟೆಯ ಗಾತ್ರ 9 ಗಂಟೆ ನಿದ್ದೆ ಮಾಡುವವರಿಗಿಂತ 2 ಸೆಂಮೀ ಜಾಸ್ತಿ ಇತ್ತು. ಹಾಗಾಗಿ ಕಡಿಮೆ ನಿದ್ದೆ ಮಾಡುವವರಿಗೆ ಬೊಜ್ಜು ಬರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಎನ್ನುತ್ತಾರೆ ವಿಜ್ಞಾನಿಗಳು.
ಕಡಿಮೆ ನಿದ್ದೆ ಡಯಾಬಿಟೀಸ್ ನಂತಹ ಮೆಟಾಬೊಲಿಕ್ ರೋಗಗಳಿಗೆ ಕಾರಣವಾಗುತ್ತದೆ. ಸಮೀಕ್ಷೆಯೊಂದರ ಪ್ರಕಾರ 1980ರ ನಂತರ ವಿಶ್ವದಲ್ಲಿ ದಪ್ಪಗಿರುವವರ ಸಂಖ್ಯೆ ದುಪ್ಪಟ್ಟಾಗಿದೆ. ಈ ಬೊಜ್ಜು ಅನೇಕ ರೋಗಗಳಿಗೆ ಮೂಲ.
ಬೊಜ್ಜಿಗೆ ಕಾರಣ ಹುಡುಕಿ ಹೊರಟ ವಿಜ್ಞಾನಿಗಳು 1615 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದಾರೆ. ಅವರು ಎಷ್ಟು ನಿದ್ದೆ ಮಾಡ್ತಾರೆ, ಎಷ್ಟು ತಿನ್ನುತ್ತಾರೆ ಅನ್ನೋದನ್ನು ಪರಿಶೀಲಿಸಲಾಗಿದೆ. ಕಡಿಮೆ ನಿದ್ದೆ ಮಾಡುವವರಲ್ಲಿ ಆರೋಗ್ಯಕರ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಿರುತ್ತದೆ ಅನ್ನೋದು ಸಂಶೋಧನೆಯಲ್ಲಿ ಪತ್ತೆಯಾಗಿದೆ.
ಎಚ್ ಡಿ ಎಲ್ ಕೊಲೆಸ್ಟ್ರಾಲ್, ರಕ್ತದ ಪರಿಚಲನೆಯನ್ನು ಸುಗಮಗೊಳಿಸುತ್ತದೆ. ಹೃದಯದ ತೊಂದರೆಗಳಿಂದ ಕಾಪಾಡುತ್ತದೆ. ಬೊಜ್ಜನ್ನು ಕೂಡ ಕಡಿಮೆ ಮಾಡುತ್ತದೆ. ಹಾಗಾಗಿ ರಾತ್ರಿ ಸರಿಯಾಗಿ ನಿದ್ದೆ ಮಾಡಿದ್ರೆ ಮಾತ್ರ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.