ವಯಸ್ಸು 35ರ ಗಡಿ ದಾಟುತ್ತಿದ್ದಂತೆ ಬಿಪಿ, ಶುಗರ್ ಸಮಸ್ಯೆಗಳು ನಿಮ್ಮನ್ನು ಕಾಡಲಾರಂಭಿಸುತ್ತವೆ. ಕೆಲವೊಮ್ಮೆ ಇದು ನಿಮ್ಮ ಹಿರಿಯರಿಂದ ನಿಮಗೆ ಬಳುವಳಿಯಾಗಿ ಬಂದಿರಬಹುದು. ಇನ್ನು ಕೆಲವೊಮ್ಮೆ ನಿಮ್ಮ ಆಹಾರ ಪದ್ಧತಿಯೇ ಇದಕ್ಕೆಲ್ಲಾ ಕಾರಣವಾಗಬಹುದು.
ಹೆಚ್ಚಿನ ಪ್ರಮಾಣದ ಕಾಫಿ ಕುಡಿಯುವುದು ಮಧುಮೇಹಕ್ಕೆ ಕಾರಣವಾಗಬಹುದು. ಇದು ದೇಹದಲ್ಲಿ ಗ್ಲುಕೋಸ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದ ದೇಹಕ್ಕೆ ಹೆಚ್ಚು ಸಿಹಿ ಪದಾರ್ಥಗಳು ಇಷ್ಟವಾಗಬಹುದು. ಇದರ ಬದಲು ಗ್ರೀನ್ ಟೀ ಕುಡಿಯುವ ಹವ್ಯಾಸ ಬೆಳೆಸಿಕೊಳ್ಳಿ.
ಒಂದೇ ಭಂಗಿಯಲ್ಲಿ ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವುದು ಕೂಡಾ ಮಧುಮೇಹಕ್ಕೆ ಕಾರಣವಾಗಬಹುದು. ಹೆಚ್ಚು ಕೆಲಸ ಮಾಡುವ ತುರಾತುರಿಯಲ್ಲಿ ಕೈಗೆ ಸಿಕ್ಕಿದ್ದೆಲ್ಲಾ ತಿನ್ನುತ್ತಾ ಇರುವುದರಿಂದ ಮಧುಮೇಹಕ್ಕೆ ನೀವು ಬಹುಬೇಗ ಬಲಿಯಾಗಬೇಕಾದೀತು.
ವಿಟಮಿನ್ ಡಿ ಯ ಕೊರತೆ, ಸೂರ್ಯನ ಬೆಳಕಿಗೆ ಹೆಚ್ಚು ಮೈಯೊಡ್ಡದೆ ಇರುವುದು, ವ್ಯಾಯಾಮ ಅಥವಾ ಮೈಮುರಿದು ಯಾವುದೇ ಕೆಲಸ ಮಾಡದಿರುವುದು, ದೇಹದಲ್ಲಿ ಬೊಜ್ಜು ಬೆಳೆಸಿಕೊಳ್ಳುವುದು ಇವೆಲ್ಲವೂ ಮಧುಮೇಹ ನಿಮ್ಮನ್ನು ಆವರಿಸಿಕೊಳ್ಳುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ.