33 ವರ್ಷಗಳ ಬಳಿಕ ಹೆತ್ತಮ್ಮನನ್ನು ಸೇರಲು ನೆರವಾಯ್ತು ಕೈ ಬರಹದ ನಕ್ಷೆ 03-01-2022 11:39AM IST / No Comments / Posted In: Latest News, Live News, International ಮೂರು ದಶಕಗಳ ಹಿಂದೆ, ಬಾಲಕನಾಗಿದ್ದಾಗ ಅಪಹರಣಕ್ಕೊಳಗಾಗಿದ್ದ ಚೀನೀ ವ್ಯಕ್ತಿಯೊಬ್ಬರು ತಮ್ಮೂರಿನ ನಕ್ಷೆಯನ್ನು ಕೈಬರಹದಲ್ಲಿ ಬರೆದು ತೋರುವ ಮೂಲಕ ತಮ್ಮ ತಾಯಿಯನ್ನು ಕಂಡುಕೊಳ್ಳಲು ಅಧಿಕಾರಿಗಳಿಗೆ ನೆರವಾಗಿದ್ದಾರೆ. ಲೀ ಜಿಂಗ್ವೇ ಎಂದು ಕರೆಯಲಾಗುವ ಈ ವ್ಯಕ್ತಿ ತನ್ನ ತಾಯಿಯನ್ನು ಪತ್ತೆ ಮಾಡುವ ತಲಾಶೆಯಲ್ಲಿ ತನ್ನೂರಿನ ನಕ್ಷೆಯನ್ನು ಕೈಯಲ್ಲಿ ಬರೆದು ಆನ್ಲೈನ್‌ನಲ್ಲಿ ಪೋಸ್ಟ್ ಮಾಡಿದ್ದರು. 37 ವರ್ಷ ವಯಸ್ಸಿನ ಈತ 4 ವರ್ಷದವನಿದ್ದಾಗ ಮಕ್ಕಳ ಕಳ್ಳರಿಂದ ಅಪಹರಣಕ್ಕೊಳಗಾಗಿದ್ದರು. ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದಲ್ಲಿ ಸದ್ಯ ವಾಸಿಸುತ್ತಿರುವ ಜಿಂಗ್ವೇ, ತನ್ನ ಹೆತ್ತವರನ್ನು ಮರೆತುಬಿಟ್ಟಿದ್ದಾರೆ. ಇದೀಗ ಇಲ್ಲಿನ ಟಿಕ್‌ಟಾಕ್ ತತ್ಸಮಾನವಾದ ಡೌಯಿನ್‌ನಲ್ಲಿ ತನ್ನೂರಿನ ನಕ್ಷೆಯೊಂದನ್ನು ಹಂಚಿಕೊಂಡ ಲೀ, ಅದರಲ್ಲಿ ಶಾಲೆ, ಬಿದಿರಿನ ಮರ ಮತ್ತು ಪುಟ್ಟದೊಂದು ಕೊಳವನ್ನು ತೋರಿದ್ದಾರೆ. “ನಾನು ನನ್ನ ಮನೆಯನ್ನು ಪತ್ತೆ ಮಾಡುತ್ತಿರುವ ಒಬ್ಬ ವ್ಯಕ್ತಿ. 1989ರಲ್ಲಿ ಒಬ್ಬ ಬೊಕ್ಕ ತಲೆಯ ವ್ಯಕ್ತಿ ನನ್ನನ್ನು ಹೆನಾನ್‌ಗೆ ಕೊಂಡೊಯ್ದಿದ್ದ. ನನ್ನ ಮನೆ ಇರುವ ಪ್ರದೇಶದ ನೆನಪುಗಳನ್ನು ಸ್ಮರಿಸಿ ಅಲ್ಲಿನ ನಕ್ಷೆಯನ್ನು ಬಿಟ್ಟಿದ್ದೇನೆ,” ಎಂದು ಲೀ ಹೇಳಿಕೊಂಡು ವಿಡಿಯೋ ಪೋಸ್ಟ್ ಮಾಡಿದ್ದರು. ವೈರಲ್ ಆದ ಈ ವಿಡಿಯೋದಿಂದಾಗಿ ಆತನ ಊರಿನ ಅಧಿಕಾರಿಗಳು ನಕ್ಷೆಯಲ್ಲಿರುವ ಊರು ಯುನಾನ್ ಪ್ರಾಂತ್ಯದಲ್ಲಿರುವ ಗುಡ್ಡಗಾಡು ನಗರ ಜ಼ಾವೋಟಾಂಗ್ ಎಂದು ಗುರುತಿಸಿದ್ದಾರೆ. ಆ ಕಾಲದಲ್ಲಿ ಪುಟ್ಟ ಊರೊಂದರಲ್ಲಿ ಮಗನನ್ನು ಕಳೆದುಕೊಂಡಿದ್ದ ಮಹಿಳೆಯೊಬ್ಬರನ್ನು ಪತ್ತೆ ಮಾಡಿದ ಪೊಲೀಸರು, ಲೀಯನ್ನು ಕರೆದುಕೊಂಡು ಬಂದು ಡಿಎನ್‌ಎ ಪರೀಕ್ಷೆ ಮಾಡಿ ಮಿಕ್ಕ ವಿಷಯವನ್ನು ಖಾತ್ರಿ ಮಾಡಿಕೊಂಡಿದ್ದಾರೆ.