ಆಹಾರ ವಿತರಣಾ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ. ಅದು ಹೇಗೆ ಅಂತಾ ಹುಬ್ಬೇರಿಸುತ್ತಿದ್ದೀರಾ ಹಾಗಿದ್ರೆ ಈ ಸ್ಟೋರಿ ಓದಿ…..
ಆಂಧ್ರಪ್ರದೇಶ ಮೂಲದ ಶೇಕ್ ಅಬ್ದುಲ್ ಸತಾರ್ ಎಂಬುವವರು ಆಹಾರ ವಿತರಣಾ ಏಜೆಂಟ್ ಆಗಿ ಅರೆಕಾಲಿಕ ಕೆಲಸ ಮಾಡುತ್ತಿದ್ದರು. ಈ ವೇಳೆ ಅವರು ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು ಹೇಗೆ ಎಂಬುದರ ಕುರಿತು ಲಿಂಕ್ಡ್ಇನ್ನಲ್ಲಿ ತಮ್ಮ ಸ್ಪೂರ್ತಿದಾಯಕ ಪ್ರಯಾಣವನ್ನು ಹಂಚಿಕೊಂಡಿದ್ದಾರೆ.
ಶೇಕ್ ಅವರು ಈ ಹಿಂದೆ ಓಲಾ, ಸ್ವಿಗ್ಗಿ, ಉಬರ್, ರಾಪಿಡೋ ಮತ್ತು ಜೊಮಾಟೊಗೆ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಈತನ ತಂದೆ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ. ಹೀಗಾಗಿ ತಾನು ತನ್ನ ಕುಟುಂಬವನ್ನು ಸಲಹಬೇಕು ಅನ್ನೋ ಉದ್ದೇಶದಿಂದ ಓದುತ್ತಲೇ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಸ್ನೇಹಿತನೊಬ್ಬ ಕೋಡಿಂಗ್ ಕೋರ್ಸ್ಗೆ ಸೇರುವಂತೆ ಒತ್ತಾಯಿಸಿದ್ದ. ಅದು ನಂತರ ಈತನನ್ನು ಸಾಫ್ಟ್ವೇರ್ ಇಂಜಿನಿಯರ್ ಆಗಲು ಸಹಾಯ ಮಾಡಿತು.
ಶೇಕ್ ಅಬ್ದುಲ್ ಸತಾರ್ ಕೋಡಿಂಗ್ ಕಲಿಯಲು ತಮ್ಮ ಸಮಯವನ್ನು ಹೇಗೆ ನಿರ್ವಹಿಸಿದ್ದಾರೆ ಎಂಬುದರ ಕುರಿತು ಹಂಚಿಕೊಂಡಿದ್ದಾರೆ. ಸಂಜೆ 6:00 ರಿಂದ ಮಧ್ಯರಾತ್ರಿ 12:00 ಗಂಟೆವರೆಗೆ ವಿತರಣಾ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ರು. ಇದರಿಂದ ಬಂದ ಹಣದಿಂದ ಶೀಘ್ರದಲ್ಲೇ ಅವರು ಸ್ವಂತ ವೆಬ್ ಅಪ್ಲಿಕೇಶನ್ಗಳನ್ನು ನಿರ್ಮಿಸಲು ಸಾಧ್ಯವಾಯಿತು.
ಅಲ್ಲದೆ, ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಅವರ ಅನುಭವವು ಸಂವಹನ ಕೌಶಲ್ಯಗಳನ್ನು ಬೆಳೆಸಲು ಸಹಾಯ ಮಾಡಿತು. ಹಾಗೂ ನೆಕ್ಸ್ಟ್ ವೇವ್ ನಲ್ಲಿ ಕೋಡಿಂಗ್ ಕೌಶಲ್ಯಗಳನ್ನು ನಿರ್ಮಿಸಿದ್ರು. ಇದೀಗ ಅವರು ಪ್ರೋಬ್ ಇನ್ಫರ್ಮೇಷನ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ (ಪ್ರೋಬ್ 42) ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಸ್ಥಾನ ಪಡೆದಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ತನ್ನ ಹೆತ್ತವರಿಗೆ ಹೆಮ್ಮೆ ತಂದಿದ್ದಾರೆ.