ಮನೆಯಲ್ಲಿ ಪುಟ್ಟ ಮಕ್ಕಳು ಇದ್ದರೆ ಅವರು ಹೇಳಿದಂತೆಯೇ ಕೇಳಬೇಕಾದ ಅನಿವಾರ್ಯತೆ ಹಲವು ಅಪ್ಪ-ಅಮ್ಮಂದಿರಿಗೆ. ಮಕ್ಕಳು ಏನು ಮಾಡಿದರೂ ಚೆಂದವೇ. ಅದೇ ರೀತಿ ಇದೀಗ ವಿಡಿಯೋ ಒಂದು ವೈರಲ್ ಆಗಿದ್ದು, ಮಗಳ ಗೊಂಬೆಯ ಡ್ರೆಸ್ಗಳನ್ನು ಅಪ್ಪ ಇಸ್ತ್ರಿ ಮಾಡುವುದನ್ನು ನೋಡಬಹುದಾಗಿದೆ;
ಒಂದು ಮಂಚದ ಮೇಲೆ ಪುಟಾಣಿ ಬಾಲಕಿ ಮಲಗಿದ್ದರೆ, ಆಕೆಯ ಗೊಂಬೆಗಳಿಗಾಗಿಯೇ ಇನ್ನೊಂದು ಮಂಚವಿದೆ. ಆ ಮಂಚದ ಮೇಲೆ ಎರಡು ಗೊಂಬೆಗಳಿದ್ದು, ಬಾಲಕಿಯ ಅಪ್ಪ ಬಟ್ಟೆಯನ್ನು ಇಸ್ತ್ರಿ ಮಾಡುವುದನ್ನು ನೋಡಬಹುದಾಗಿದೆ.
ಈ ಬಟ್ಟೆಗಳು ಯಾರದ್ದು ಎಂದು ಕೇಳಿದಾಗ ಗೊಂಬೆಗಳ ಬಟ್ಟೆ ಎಂದು ಅಪ್ಪ ಹೇಳುತ್ತಾನೆ. ತನ್ನ ಗೊಂಬೆಗಳ ಬಟ್ಟೆಗಳಿಗೆ ಇಸ್ತ್ರಿ ಮಾಡುವಂತೆ ಮಗಳು ತಾಕೀತು ಮಾಡಿದ್ದರಿಂದ ತಾನು ಹಾಗೆ ಮಾಡುತ್ತಿರುವುದಾಗಿ ಅಪ್ಪ ಹೇಳಿರುವ ವಿಡಿಯೋ ಇದಾಗಿದೆ. ಇದರ ವಿಡಿಯೋ ಅನ್ನು ಮಗುವಿನ ಅಮ್ಮ ಮಾಡಿದ್ದು, ಜಾಲತಾಣದಲ್ಲಿ ನೆಟ್ಟಿಗರ ಮನಸ್ಸನ್ನು ಈ ವಿಡಿಯೋ ಗೆದ್ದಿದೆ.
ಮೊದಲು ಮಂಚದ ಮೇಲಿರುವ ಬಟ್ಟೆಗಳನ್ನು ಮಡಚಿಇಡಲು ತನಗೆ ಸಹಾಯ ಮಾಡಿ ಎಂದು ಪತ್ನಿ ಕೇಳಿದಾಗ, ಗಂಡ ಮೊದಲು ಮಗಳ ಗೊಂಬೆಗಳ ಬಟ್ಟೆ ಇಸ್ತ್ರಿಮಾಡಿ ಆಮೇಲೆ ನಿನಗೆ ಸಹಾಯ ಮಾಡುವುದಾಗಿ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು. ಈತನೇ ವರ್ಷದ ಅಪ್ಪ ಎಂದು ಹಲವರು ಕಮೆಂಟ್ ಮಾಡಿದ್ದಾರೆ.