ವ್ಯಕ್ತಿ ಆರೋಗ್ಯವಾಗಿರಲು ಕನಿಷ್ಠ 8 ಗಂಟೆಗಳ ನಿದ್ದೆ ಅತ್ಯವಶ್ಯಕ. ನಿದ್ದೆಯೇ ನಮ್ಮ ಆರೋಗ್ಯದ ಗುಟ್ಟು. ಆದರೆ ಜಪಾನ್ನ ವ್ಯಕ್ತಿಯೊಬ್ಬ ಕಳೆದ 12 ವರ್ಷಗಳಿಂದ ಪ್ರತಿದಿನ ಕೇವಲ 30 ನಿಮಿಷ ನಿದ್ದೆ ಮಾಡುತ್ತಾರೆ. ಈತ ಸಂಪೂರ್ಣ ಫಿಟ್ ಆಗಿದ್ದಾನೆ. ಡೈಸುಕೆ ಹೋರಿ ಎಂಬಾತ ಪ್ರತಿದಿನ ಕೇವಲ 30 ನಿಮಿಷ ಮಲಗುತ್ತಾನೆ ಮತ್ತು ಉಳಿದ ಸಮಯದಲ್ಲಿ ಜಿಮ್ನಲ್ಲಿ ವ್ಯಾಯಾಮ ಮಾಡುತ್ತಾನೆ.
ಕಡಿಮೆ ನಿದ್ದೆ ಮಾಡಿದರೂ ತನ್ನ ದೇಹ ಮತ್ತು ಮನಸ್ಸನ್ನು ಸಂಪೂರ್ಣವಾಗಿ ಕೆಲಸ ಮಾಡುವ ರೀತಿಯಲ್ಲಿ ತರಬೇತಿ ನೀಡಿರುವುದರಿಂದ ಈತನ ಆರೋಗ್ಯದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮವಾಗಿಲ್ಲ.
ಹೋರಿ ಕ್ರಮೇಣ ನಿದ್ದೆ ಕಡಿಮೆ ಮಾಡಲು ಪ್ರಾರಂಭಿಸಿದ. ನಿದ್ದೆ ಕಡಿಮೆ ಮಾಡುವುದರಿಂದ ದಿನದಲ್ಲಿ ಹೆಚ್ಚು ಸಮಯ ಸಕ್ರಿಯವಾಗಿರಬಹುದು ಎಂಬುದು ಈತನ ಲೆಕ್ಕಾಚಾರ. ಹಾಗಾಗಿಯೇ ಪ್ರತಿದಿನ ಕೇವಲ 30-45 ನಿಮಿಷ ನಿದ್ದೆ ಮಾಡಲು ಪ್ರಾರಂಭಿಸಿದ. ತಿನ್ನುವ ಒಂದು ಗಂಟೆ ಮೊದಲು ಆಟ ಆಡಿದರೆ ಅಥವಾ ಕಾಫಿ ಕುಡಿದರೆ ನಿದ್ರೆಯನ್ನು ಕಡಿಮೆ ಮಾಡಬಹುದು.
ನಾವು ಎಷ್ಟು ಸಮಯ ನಿದ್ದೆ ಮಾಡುತ್ತೇವೆ ಎಂಬುದಕ್ಕಿಂತ ನಿದ್ರೆಯ ಗುಣಮಟ್ಟವು ಹೆಚ್ಚು ಮುಖ್ಯ ಎನ್ನುತ್ತಾನೆ ಹೋರಿ. ವೈದ್ಯರು ಮತ್ತು ಅಗ್ನಿಶಾಮಕ ಸಿಬ್ಬಂದಿಗೆಲ್ಲ ವಿಶ್ರಾಂತಿಗೆ ಸಿಗುವ ಸಮಯ ಕಡಿಮೆ, ಆದರೆ ಅವರು ತಮ್ಮ ಕೆಲಸದಲ್ಲಿ ತುಂಬಾ ಸಮರ್ಥರಾಗಿದ್ದಾರೆ ಎಂದಾತ ಹೇಳುತ್ತಾನೆ. ತಮ್ಮ ಕೆಲಸದ ಮೇಲೆ ನಿರಂತರವಾಗಿ ಗಮನ ಹರಿಸಬೇಕಾದ ಜನರು ದೀರ್ಘ ನಿದ್ರೆಗಿಂತ ಉತ್ತಮ ಗುಣಮಟ್ಟದ ನಿದ್ರೆಯಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯುತ್ತಾರಂತೆ.
ಸುಮಾರು ಎಂಟು ವರ್ಷಗಳ ಹಿಂದೆ ಹೋರಿ ಜಪಾನ್ ಶಾರ್ಟ್ ಸ್ಲೀಪರ್ಸ್ ಟ್ರೈನಿಂಗ್ ಅಸೋಸಿಯೇಷನ್ ಅನ್ನು ಪ್ರಾರಂಭಿಸಿದರು. ನಿದ್ದೆ ಕಡಿಮೆ ಮಾಡುವುದು ಹೇಗೆ ಎಂಬುದನ್ನು ಈತ ಪಾಠ ಮಾಡುತ್ತಾನೆ. 2,100 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈತ ಅಲ್ಟ್ರಾ-ಶಾರ್ಟ್ ಸ್ಲೀಪರ್ಸ್ ಆಗಲು ತರಬೇತಿ ನೀಡಿದ್ದಾನಂತೆ. ರಿಯಾಲಿಟಿ ಶೋ ಒಂದರಲ್ಲಿ ಪಾಲ್ಗೊಂಡಿದ್ದ ಈತ ಕೇವಲ 26 ನಿಮಿಷಗಳ ನಿದ್ರೆಯ ನಂತರ ಸಂಪೂರ್ಣವಾಗಿ ರಿಫ್ರೆಶ್ ಮತ್ತು ಶಕ್ತಿಯುತವಾಗಿ ಎಚ್ಚರಗೊಂಡಿದ್ದ.
ಈತನ ಮಲಗುವ ಅಭ್ಯಾಸವು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ. ಕೆಲವರು ಇದರಿಂದ ಪ್ರಭಾವಿತರಾಗಿದ್ದಾರೆ ಮತ್ತು ಕಡಿಮೆ ನಿದ್ರೆ ಮಾಡುವ ಕಲೆಯನ್ನು ಕಲಿಯಲು ಬಯಸುತ್ತಾರೆ. ಆದರೆ ಇದು ಹೃದಯದ ಮೇಲೆ ಒತ್ತಡವನ್ನು ಉಂಟುಮಾಡಬಹುದು ಎಂದು ಹೇಳಲಾಗ್ತಿದೆ. ದೇಹ ಮತ್ತು ಮನಸ್ಸನ್ನು ಗುಣಪಡಿಸಲು ಮತ್ತು ಹೃದ್ರೋಗವನ್ನು ತಡೆಗಟ್ಟಲು ಪ್ರತಿ ರಾತ್ರಿ ಏಳರಿಂದ ಒಂಬತ್ತು ಗಂಟೆಗಳ ಕಾಲ ನಿದ್ದೆ ಮಾಡಲು ವೈದ್ಯರು ಶಿಫಾರಸು ಮಾಡುತ್ತಾರೆ.