ಕಣ್ಣೂರು ಜಿಲ್ಲೆಯ ಪರಸ್ಸಿನಿ ಮಡಪ್ಪುರ ಶ್ರೀ ಮುತ್ತಪ್ಪನ್ ದೇವಸ್ಥಾನದಲ್ಲಿ ನಾಯಿಗಳನ್ನು ಪೂಜಿಸಲಾಗುತ್ತಿದ್ದು, ಪ್ರತಿದಿನ ಭಕ್ತರನ್ನು ಆಕರ್ಷಿಸುತ್ತದೆ. ವಾಲಪಟ್ಟಣಂ ನದಿಯ ದಡದಲ್ಲಿರುವ ಈ ದೇವಾಲಯವು ಅದರ ಪ್ರವೇಶದ್ವಾರವನ್ನು ಕಾವಲು ಕಾಯುತ್ತಿರುವ ನಾಯಿಗಳ ಎರಡು ಕಂಚಿನ ಪ್ರತಿಮೆಗಳಿಂದ ಸುಲಭವಾಗಿ ಗುರುತಿಸಲ್ಪಡುತ್ತದೆ. ಶಿವ ಮತ್ತು ವಿಷ್ಣುವಿನ ಅವತಾರವೆಂದು ಪರಿಗಣಿಸಲಾದ ದೇವಾಲಯದ ದೇವತೆಯಾದ ಶ್ರೀ ಮುತ್ತಪ್ಪನ ನೆಚ್ಚಿನ ಪ್ರಾಣಿಗಳು ನಾಯಿಗಳು ಎಂದು ಭಕ್ತರು ನಂಬುತ್ತಾರೆ. ದೈನಂದಿನ ಪ್ರಾರ್ಥನೆಯ ನಂತರ, ಅರ್ಚಕ ಮೊದಲು ನಾಯಿಗೆ ಪ್ರಸಾದವನ್ನು ನೀಡುತ್ತಾನೆ.
ಐತಿಹಾಸಿಕ ಮಹತ್ವ
ದೇವಾಲಯದ ಇತಿಹಾಸವು ಹಿಂದಿನ ಕಾಲದ ದಬ್ಬಾಳಿಕೆಯ ಪದ್ಧತಿಗಳೊಂದಿಗೆ ಹೆಣೆದುಕೊಂಡಿದ್ದು, ಆಗ ಮಲಬಾರ್ ಪ್ರದೇಶದಲ್ಲಿ ಕೆಳಜಾತಿಯ ಸದಸ್ಯರಿಗೆ ಘನತೆ ಮತ್ತು ಸ್ವಾತಂತ್ರ್ಯವನ್ನು ನಿರಾಕರಿಸಲಾಗಿತ್ತು. ಶ್ರೀ ಮುತ್ತಪ್ಪನ್ ಅವರನ್ನು ಅಂಚಿನಲ್ಲಿರುವ ಸಮುದಾಯಗಳ ವಿಮೋಚಕರೆಂದು ನೋಡಲಾಗುತ್ತದೆ, ಅವರು ಪ್ರಾಣಿಗಳೊಂದಿಗೆ, ವಿಶೇಷವಾಗಿ ನಾಯಿಗಳೊಂದಿಗೆ ನಿಕಟ ಬಂಧವನ್ನು ಹಂಚಿಕೊಂಡಿದ್ದರು. ಪುರಾಣಗಳ ಪ್ರಕಾರ, ಶ್ರೀ ಮುತ್ತಪ್ಪನ್ ಅವರು ಸಾಮಾಜಿಕ ಅನಿಷ್ಟಗಳನ್ನು ಎದುರಿಸಲು ಮಲಬಾರ್ ಪ್ರದೇಶಕ್ಕೆ ಆಗಮಿಸಿದಾಗ ತಮ್ಮ ಜೊತೆ ನಾಯಿಯನ್ನು ಕರೆದುಕೊಂಡು ಹೋಗುತ್ತಿರುತ್ತಾರೆ.
ದೇವಸ್ಥಾನದ ಟ್ರಸ್ಟಿ ನಿರ್ಮಲ್ ಪರಸ್ಸಿನಿ ಮಡಪ್ಪುರ ಪ್ರಕಾರ, ಶ್ರೀ ಮುತ್ತಪ್ಪನ್ ಯಾವಾಗಲೂ ನಾಯಿಯೊಂದಿಗೆ ಇರುತ್ತಿದ್ದರು. ನಾಯಿಗಳನ್ನು ಇಲ್ಲಿ ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ದೇವಾಲಯದ ಒಳಗೆ ಮತ್ತು ಸುತ್ತಮುತ್ತಲು ಹೆಚ್ಚಿನ ಸಂಖ್ಯೆಯಲ್ಲಿ ಮುಕ್ತವಾಗಿ ವಿಹರಿಸುತ್ತವೆ. ದೇವಾಲಯಕ್ಕೆ ವಾರದ ದಿನಗಳಲ್ಲಿ ಸುಮಾರು 9,000 ಮತ್ತು ವಾರಾಂತ್ಯದಲ್ಲಿ 25,000 ಪ್ರವಾಸಿಗರು ಬರುತ್ತಾರೆ ಎಂದಿದ್ದಾರೆ.
ನಾಯಿಗಳಿಗೆ ಆಹಾರ ನೀಡುವುದು
ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ, ದೇವಸ್ಥಾನದ ವತಿಯಿಂದ, ನಾಯಿಗಳಿಗೆ ಆಹಾರ ನೀಡಲಾಗುತ್ತಿದ್ದು, ಮುಖ್ಯವಾಗಿ ಒಣಗಿದ ಮೀನಿನೊಂದಿಗೆ ಆರಂಭವಾಗುತ್ತದೆ. ನಾಯಿಗಳಿಗೂ ಸಹ ತಮ್ಮ ಆಹಾರದ ಸಮಯ ಯಾವಾಗ ಎಂದು ತಿಳಿದಿದ್ದು, ಆ ಸಮಯಕ್ಕೆ ಬಂದು ನೆರೆದಿರುತ್ತವೆ.
ಜನರು ತಮ್ಮ ನಾಯಿಗಳ ಹೆಸರಿನಲ್ಲಿ ಪ್ರಾರ್ಥನೆ ಸಲ್ಲಿಸಲು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಯಾರದಾದ್ದರೂ ಸಾಕು ನಾಯಿ ಅಸ್ವಸ್ಥವಾಗಿದ್ದರೆ, ಅವರು ಪರಸ್ಸಿನಿ ದೇವಸ್ಥಾನಕ್ಕೆ ಹೋಗಿ ಅದರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾರೆ.