
ಮದುವೆ ಸಮಾರಂಭದಲ್ಲಿ ಕನಸಿನ ಉಡುಗೆಗಳನ್ನು ಧರಿಸಿ ಮಿಂಚಬೇಕೆಂಬುದು ಎಲ್ಲರಿಗೂ ಇರುವ ಸಾಮಾನ್ಯವಾದ ಆಸೆಗಳಲ್ಲಿ ಒಂದು. ಆದರೆ ಎಲ್ಲರಿಗೂ ಇದನ್ನು ನನಸಾಗಿಸುವ ಆರ್ಥಿಕ ಚೈತನ್ಯ ಇರುವುದಿಲ್ಲ.
ಕೇರಳದ ಮಲಪ್ಪುರಂ ನಿವಾಸಿಯೊಬ್ಬರು ಇದಕ್ಕೆಂದೇ ’ಫುಡ್ ಬ್ಯಾಂಕ್’, ’ಬ್ಲಡ್ ಬ್ಯಾಂಕ್’ ಮಾದರಿಯಲ್ಲಿ ’ಡ್ರೆಸ್ ಬ್ಯಾಂಕ್’ ನಿರ್ಮಿಸಿ, ಬಡವರ್ಗಗಳ ಹೆಣ್ಣು ಮಕ್ಕಳ ಮದುವೆಗಳಿಗೆ ನೀಡಲೆಂದು ಮದುವೆ ಬಟ್ಟೆಗಳ ಭಂಡಾರ ರಚಿಸಿದ್ದಾರೆ.
ನಸರ್ ತೂಟ ಹೆಸರಿನ ಟ್ಯಾಕ್ಸಿ ಚಾಲಕರೊಬ್ಬರು ಈ ಡ್ರೆಸ್ ಬ್ಯಾಂಕ್ ಸ್ಥಾಪಿಸಿದ್ದಾರೆ. ಉಳ್ಳವರು ನೀಡುವ ದೇಣಿಗೆಗಳು ಹಾಗೂ ಮದುವೆ ಸಮಾರಂಭಗಳಲ್ಲಿ ಒಮ್ಮೆ ಧರಿಸಿದ ಬಳಿಕ ಕೊಡುವ ಬಟ್ಟೆಗಳ ಮೂಲಕ ನಸರ್ ಈ ಡ್ರೆಸ್ ಬ್ಯಾಂಕ್ ನಡೆಸುತ್ತಿದ್ದಾರೆ.
ಮಾರ್ಚ್ 2020ರಲ್ಲಿ ಸ್ಥಾಪನೆಯಾದ ಈ ಡ್ರೆಸ್ ಬ್ಯಾಂಕ್‌ಗೆ ಬಳಸದೇ ಇರುವ ತಮ್ಮ ಬಟ್ಟೆಗಳನ್ನು ಕೊಡಲು ಫೇಸ್ಬುಕ್ ಹಾಗೂ ವಾಟ್ಸಾಪ್‌ಗಳ ಮೂಲಕ ನಸರ್ ಕೋರಿಕೊಳ್ಳುತ್ತಾ ಬಂದಿದ್ದಾರೆ.
ಸೌದಿ ಅರೇಬಿಯಾದಲ್ಲಿ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ನಸರ್ ಈಗ ಅಲ್ಲಿಂದ ಬಂದು ಹೀಗೊಂದು ಸಾಮಾಜಿಕ ಸೇವೆಯಲ್ಲಿ ಭಾಗಿಯಾಗಿದ್ದಾರೆ.