
ಕೆಲವೊಮ್ಮೆ ಬೆಳಗ್ಗೆ ತಿಂದ ಆಹಾರ ಸಂಜೆಯಾದರೂ ಜೀರ್ಣವಾಗುವುದಿಲ್ಲ. ಹೊಟ್ಟೆ ತುಂಬಿದ ಅನುಭವ ಮಾತ್ರವಲ್ಲ ಕೆಲವೊಮ್ಮೆ ಹೊಟ್ಟೆ ನೋವು ಕೂಡಾ ಕಾಣಿಸಿಕೊಳ್ಳುತ್ತದೆ. ಜೀರ್ಣದ ಸಮಸ್ಯೆಯೇ ಇದಕ್ಕೆ ಮುಖ್ಯ ಕಾರಣ.
ಸಾಮಾನ್ಯವಾಗಿ ನಾವು ಸೇವಿಸಿದ ಆಹಾರ ತಿಂದ ಮೂರು ಗಂಟೆಯೊಳಗೆ ಜೀರ್ಣವಾಗುತ್ತದೆ. ಹಾಗಾಗದಿದ್ದರೆ ನಿಮಗೆ ಅಜೀರ್ಣ ಸಮಸ್ಯೆ ಇದೇ ಎಂದರ್ಥ. ಪದೇ ಪದೇ ಹೀಗಾಗುತ್ತಿದ್ದರೆ ಜೀರಿಗೆ ಕಷಾಯ ಮಾಡಿ ಕುಡಿಯುವುದು ಒಳ್ಳೆಯದು.
ಜೀರಿಗೆಯನ್ನು ಪುಡಿ ಮಾಡಿ ಇಟ್ಟುಕೊಳ್ಳಿ. ಎರಡು ಲೋಟ ನೀರಿಗೆ ಅರ್ಧ ಚಮಚ ಪುಡಿ ಹಾಕಿ ಕುದಿಸಿ. ಅದು ಒಂದು ಲೋಟಕ್ಕೆ ಇಳಿದಾಗ ತುಸು ಬೆಲ್ಲ ಸೇರಿಸಿ. ಇದನ್ನು ಕನಿಷ್ಠ ಮೂರು ಹೊತ್ತಿನಂತೆ ಒಂದು ವಾರದ ತನಕ ಸೇವಿಸಿದರೆ ಜೀರ್ಣ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ.
ಶುಂಠಿ ಕಷಾಯದಿಂದಲೂ ನೀವು ಉತ್ತಮ ಲಾಭ ಪಡೆಯಬಹುದು. ಶುಂಠಿಯನ್ನು ಜಜ್ಜಿ ಅಥವಾ ಒಣ ಶುಂಠಿ ಪುಡಿಯನ್ನು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ತುಸು ಬೆಲ್ಲ ಹಾಕಿ ಕುಡಿಯಿರಿ. ಇದನ್ನು ದಿನಕ್ಕೊಮ್ಮೆ ಕುಡಿದರೆ ಸಾಕು. ವಾರದ ತನಕ ಬಿಡದೆ ಕುಡಿಯಿರಿ.