ನೀವು ಎಂದಾದರೂ ಕೆಫೆ ಅಥವಾ ರೆಸ್ಟೋರೆಂಟ್‌ಗೆ ಹೋಗಿ ನೀವೇ ಅಡುಗೆ ತಯಾರಿಸಿ ಊಟ ಮಾಡಿದ್ದೀರಾ? ಮೀನು ಪ್ರಿಯರಾಗಿದ್ದರೆ ನೀವೇ ಮೀನು ತೆಗೆದುಕೊಂಡು ಹೋಗಿ ಇದರ ಪದಾರ್ಥ ಮಾಡು ಎಂದಿದ್ದೀರಾ? ಇದೆಂಥ ಪ್ರಶ್ನೆ ಎಂದು ಅಚ್ಚರಿಯಾಯ್ತಾ?
ಜಪಾನ್‌ನ ರೆಸ್ಟೋರೆಂಟ್ ಒಂದರಲ್ಲಿ ನೀವೇ ಹೋಗಿ ಅಡುಗೆ ತಯಾರಿಸಿ ತಿನ್ನಬಹುದು, ಇಲ್ಲವೇ ನೀವು ಕೊಟ್ಟ ಮೀನಿನ ಖಾದ್ಯಗಳನ್ನೇ ಸವಿಯಬಹುದು. ಏಕೆಂದರೆ ಇಲ್ಲಿರುವ ಕೊಳದಲ್ಲಿ ಹಲವಾರು ಬಗೆಯ ಮೀನುಗಳು ಇದ್ದು, ಗ್ರಾಹಕರು ಅವುಗಳನ್ನು ಹಿಡಿಯಲು ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆಯಂತೆ!
ಜಪಾನ್‌ನ ಒಸಾಕಾದಲ್ಲಿರುವ ಝೌವೊ ರೆಸ್ಟೊರೆಂಟ್ ಇಂಥದ್ದೊಂದು ಸೇವೆ ಒದಗಿಸುತ್ತಿದೆ. ರೆಸ್ಟೋರೆಂಟ್‌ನಲ್ಲಿರುವ ಕೊಳದಿಂದ ಮೀನು ಹಿಡಿಯಲು ಅಥವಾ ದೋಣಿಯಲ್ಲಿ ಕುಳಿತು ಆನಂದಿಸಲು ಇಲ್ಲಿ ಅವಕಾಶವಿದೆ.
ಗ್ರಾಹಕರು ಮೀನು ಹಿಡಿದ ನಂತರ, ಗ್ರಾಹಕರು ಬೇಕಿದ್ದರೆ ತಾವೇ ಅಡುಗೆ ತಯಾರಿಸಿ ತಿನ್ನಬಹುದು. ಇಲ್ಲವೇ ಯಾವ ಮೀನನ್ನು ಗ್ರಾಹಕರು ಹಿಡಿಯುತ್ತಾರೆಯೋ ಆ ಮೀನಿನ ಜತೆ ಫೋಟೋ ಕ್ಲಿಕ್ಕಿಸಿ ಅಲ್ಲಿಯ ಸಿಬ್ಬಂದಿ ಬಾಣಸಿಗರಿಗೆ ಕಳುಹಿಸುತ್ತಾರೆ. ನಂತರ ಅದೇ ಮೀನಿನಲ್ಲಿ ಏನು ಪದಾರ್ಥ ಬೇಕು ಎಂದು ಗ್ರಾಹಕರಿಗೆ ಕೇಳಿ ಅವರ ಇಷ್ಟದಂತೆ ಪದಾರ್ಥ ಮಾಡಿಕೊಡುತ್ತಾರೆ.! ತಾವೇ ಹಿಡಿದ ಮೀನನ್ನು ತಿನ್ನಲು ಗ್ರಾಹಕರು ಮುಗಿಬೀಳುತ್ತಿದ್ದಾರೆ.