ಸೈಬರ್ ಸೆಕ್ಯೂರಿಟಿ ಕ್ಷೇತ್ರದ ದಿಗ್ಗಜ ಕಂಪನಿ ಎನಿಸಿರುವ ’ಟಿಎಸಿ ಸೆಕ್ಯೂರಿಟಿ’ ತನ್ನ ಮುಂಬಯಿ ಕಚೇರಿಯಲ್ಲಿ ಇನ್ಮುಂದೆ ವಾರದಲ್ಲಿ ಕೇವಲ ನಾಲ್ಕೇ ದಿನಗಳು ಕೆಲಸ ಮಾಡುವಂತಹ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಕಳೆದ ಏಳು ತಿಂಗಳಿಂದ ಈ ಕಂಪನಿಯ ಉದ್ಯೋಗಿಗಳು ವಾರದಲ್ಲಿ ನಾಲ್ಕೇ ದಿನ ಕೆಲಸದ ವ್ಯವಸ್ಥೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಕಂಪನಿಯ ಉತ್ಪಾದನಾ ಪ್ರಮಾಣವನ್ನು ಕೂಡ ಬಹಳ ಸುಧಾರಿಸಿದೆ ಎಂದು ಆಡಳಿತ ಮಂಡಳಿ ಕಂಡುಕೊಂಡಿದೆ.
ಸುಮಾರು 200 ಉದ್ಯೋಗಿಗಳಿರುವ ಕಂಪನಿಯ ಹೊಸ ವ್ಯವಸ್ಥೆಯಿಂದ ನೌಕರರಿಗೆ ವಾರಾಂತ್ಯವಾಗಿ ಮೂರು ದಿನಗಳು ರಜೆ ಸಿಗಲಿದೆ. ಈ ಮೂರು ದಿನಗಳಲ್ಲಿ ಅವರು ಕೌಟುಂಬಿಕ ಕರ್ತವ್ಯಗಳು, ಸಮಾಜದ ಕಡೆಗಿನ ತಮ್ಮದೇ ಬದ್ಧತೆಗಳು, ವ್ಯಕ್ತಿತ್ವ ನಿರ್ಮಾಣ, ಮಾನಸಿಕ ಸ್ಥಿತಿ ಸುಧಾರಣೆ ಚಿಕಿತ್ಸೆಗಳ ಕಡೆಗೂ ಗಮನಹರಿಸುತ್ತಿದ್ದಾರೆ. ಹೀಗಾಗಿ ಪೂರ್ಣ ‘ಫ್ರೆಶ್’ ಆಗಿ ಕಚೇರಿಗೆ ಆಗಮಿಸಿ ನಾಲ್ಕು ದಿನಗಳು ಶೇ. 90ರಷ್ಟು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದಾರೆ.
ಮತ್ತೊಮ್ಮೆ ಕ್ರೌರ್ಯ ಮೆರೆದ ತಾಲಿಬಾನಿಗಳು; ತಂದೆ ಮೇಲಿನ ಸಿಟ್ಟಿಗೆ ಕಂದನ ಕೊಲೆ
ಹಲವು ಉದ್ಯೋಗಿಗಳು ತಮ್ಮ ವೃತ್ತಿಗೆ ಪೂರಕವಾದ ವ್ಯಾಸಂಗದಲ್ಲೂ ವಾರಾಂತ್ಯದಲ್ಲಿ ನಿರತರಾಗಿದ್ದಾರೆ. ಕಂಪನಿಯ ಹೊಸ ಪ್ರಾಜೆಕ್ಟ್ ಗಳಿಗೆ ಇದು ನೆರವಾಗುತ್ತಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಖ್ಯವಾಗಿ ಟೀಮ್ ಲೀಡರ್ಸ್‌ಗಳು ತಮ್ಮ ವೃತ್ತಿ-ಖಾಸಗಿ ಜೀವನದಲ್ಲಿ ಸಮತೋಲನ ಕಾಯ್ದುಕೊಂಡು, ಕಿರಿಯ ಉದ್ಯೋಗಿಗಳಿಗೆ ಮಹತ್ವದ ಸಲಹೆಗಳನ್ನು ನೀಡುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದಾಗಿ ಟೀಮ್ ಲೀಡರ್ಸ್‌ಗಳ ಮೇಲೆ ತಂಡದ ಸದಸ್ಯರಿಗೆ ಗೌರವ ಹೆಚ್ಚುತ್ತಿದೆ. ಕೆಲಸಗಳು ತ್ವರಿತ ಗತಿಯಲ್ಲಿ ಸಾಗುತ್ತಿವೆ ಎನ್ನುತ್ತಾರೆ ಸಿಇಒ ತ್ರಿಶ್ಣೀತ್ ಅರೋರಾ ಅವರು.
ನಾಲ್ಕು ದಿನಗಳ ಕೆಲಸವೇ ’ಗ್ಲೋಬಲ್ ವರ್ಕ್ ಡೇ’ ಕಾರ್ಯತಂತ್ರವಾಗಲಿದೆ. ’ಫ್ಯೂಚರ್ ಆಫ್ ವರ್ಕ್’ ಇದೇ ಎಂದು ವಿಶ್ವಾಸದಿಂದ ಅವರು ಹೇಳಿದ್ದಾರೆ.