ತಮ್ಮ ಹಾಸ್ಯ ಪ್ರಜ್ಞಯಿಂದ ಸದಾ ನೆಟ್ಟಿಗರನ್ನು ನಕ್ಕು ನಲಿಸುವ ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪರಿಚಯ ನೀಡುವ ಅಗತ್ಯವಿಲ್ಲ.
ಈ ಬಾರಿ ತಮ್ಮ ತಮಾಷೆಯನ್ನು ’ಅವಿವಾಹಿತರಾಗಿ ಉಳಿಯುವ’ ವಿಚಾರಕ್ಕೆ ವ್ಯಾಪಿಸಿರುವ ಅಲಾಂಗ್, ದಂಪತಿಗಳ ದಿನನಿತ್ಯದ ಬದುಕಿನ ಘಳಿಗೆಯೊಂದರ ವಿಡಿಯೋ ಶೇರ್ ಮಾಡಿ ಅದಕ್ಕೊಂದು ಸುಂದರವಾದ ಕ್ಯಾಪ್ಷನ್ ಕೊಟ್ಟಿದ್ದಾರೆ.
ಅಡುಗೆಮನೆಯಲ್ಲಿ ಬೆಂಕಿ ಅವಘಡ ಸಂಭವಿಸುತ್ತಲೇ ಪತಿ ತನ್ನ ಪತ್ನಿಯನ್ನು ಬಿಟ್ಟು ಮಗಳನ್ನು ಎತ್ತಿಕೊಂಡು ಅಲ್ಲಿಂದ ಓಡಿ ಹೋಗುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ತನ್ನ ಮಡದಿ ಬೆಂಕಿಯನ್ನು ಆರಿಸುವ ಪ್ರಯತ್ನದಲ್ಲಿದ್ದ ವೇಳೆಯೇ ಪತಿ ಹೀಗೆ ಮಗಳನ್ನು ಎತ್ತಿಕೊಂಡು ಓಡಿ ಹೋಗುವ ವೇಳೆ ಅಡುಗೆ ಮನೆಯ ಬಾಗಿಲನ್ನೂ ಹಿಂದಕ್ಕೆ ತಳ್ಳಿಬಿಟ್ಟಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಡದಿ ಕಾಲಲ್ಲಿದ್ದ ಚಪ್ಪಲಿಯನ್ನು ಬಿಚ್ಚಿಕೊಂಡು ಗಂಡನ ಹಿಂದೆ ಓಡಿ ಹೋಗುತ್ತಿರುವುದನ್ನು ನೋಡಬಹುದಾಗಿದೆ.
“ನಾವು ಹೀಗೆ ಮಾಡಬಹುದೇ… ಪ್ರೀತಿ ಅಪ್ಪ ಹಾಗೂ ಕಾಳಜಿ ತೋರುವ ಗಂಡನ ನಡುವಿನ ಘರ್ಷಣೆಯು ಬೆಂಕಿಯೊಂದಿಗೆ ಸರಸವಾಡಿದಂತೆ. ಈ ಕಾರಣಕ್ಕೇ ನೋಡಿ ನಾನು ಸಿಂಗಲ್ ಆಗಿ ಸುರಕ್ಷಿತವಾಗಿರಲು ಬಯಸುತ್ತೇನೆ. ಏನೇ ಆಗಲಿ, ಗಂಭೀರವಾದ ವಿಚಾರವೆಂದರೆ, ಬೆಂಕಿಯನ್ನು ಹಗುರವಾಗಿ ತೆಗೆದುಕೊಳ್ಳಬಾರದು. ನಿಮ್ಮ ಮನೆಗಳಲ್ಲಿ ಅಗ್ನಿಸುರಕ್ಷತಾ ಉಪಕರಣ ಅಳವಡಿಸಿ,” ಎಂದು ಅಲಾಂಗ್ ಈ ವಿಡಿಯೋಗೆ ಕ್ಯಾಪ್ಷನ್ ಕೊಟ್ಟಿದ್ದಾರೆ.