ಪಿತೃ ಪಕ್ಷದಲ್ಲಿ ಅಗಲಿದ ಹಿರಿಯರಿಗೆ ಪಿಂಡ ಪ್ರದಾನ ಮಾಡಿ ಶ್ರಾದ್ಧ ನೆರವೇರಿಸುತ್ತಾರೆ. ಶ್ರದ್ಧೆ ಇರುವವರು ಮಾಡುವ ಕ್ರಿಯೆಯೇ ಶ್ರಾದ್ಧ. ನಮ್ಮ ಅಸ್ತಿತ್ವಕ್ಕೆ ಕಾರಣರಾದ ಹಿರಿಯರನ್ನು ನೆನೆದು ಅವರಿಗಾಗಿ ಗೌರವ ಸೂಚಕವಾಗಿ ಪೂಜೆ, ತರ್ಪಣ, ದಾನ ಧರ್ಮಗಳನ್ನು ಮಾಡುವುದು ಅಗಲಿದ ಆತ್ಮಕ್ಕೆ ಶಾಂತಿ ಹಾಗೂ ಮೋಕ್ಷಕ್ಕೆ ಮಾರ್ಗ.
ಇನ್ನು ಪಿತೃ ಪಕ್ಷದಲ್ಲಿ ಪಿಂಡ ಪ್ರದಾನ ಮಾಡೋದು ಯಾಕೆ ? ಪಿಂಡ ಅಂದರೇನು ?
ಪಿಂಡ ಅಂದ್ರೆ ಪಿತೃಗಳ ಆಹಾರ. ಈ ಮೂಲಕ ಅಗಲಿದ 3 ತಲೆಮಾರುಗಳಿಗೆ ಪಿಂಡ ಪ್ರದಾನ ಮಾಡುವುದರ ಮೂಲಕ ಆಹಾರ ಕೊಡಲಾಗುತ್ತದೆ.
ದೇವಲೋಕ, ಸ್ವರ್ಗಲೋಕ, ಪಾತಳಲೋಕ, ಯಮಲೋಕ ಹಾಗೆ ಪಿತೃ ಲೋಕವೂ ಒಂದಿದೆ. ಪಿತೃಗಳು ಇಲ್ಲಿ ವಾಸವಾಗಿರ್ತಾರೆ. ಕಾಲಮಾನದ ಲೆಕ್ಕಾಚಾರದಲ್ಲಿ ಭೂಲೋಕದ ಜನರಿಗೆ ಒಂದು ವರ್ಷ ಪಿತೃ ಲೋಕದ ಪಾಲಿಗೆ ಒಂದು ದಿವಸ. ಹಾಗಾಗಿ ನಾವಿಲ್ಲಿ ವರ್ಷಕ್ಕೆ ಒಮ್ಮೆ ಇಡುವ ಪಿಂಡ ಪಿತೃಗಳಿಗೆ ದಿನಕೊಮ್ಮೆ ಆಹಾರ ಸಿಕ್ಕ ಹಾಗೆ.
ಯಾರು ಪಿತೃಗಳಿಗೆ ಶ್ರಾದ್ಧ ಮಾಡುವುದಿಲ್ಲವೋ ಅವರು ಪಿತೃಗಳ ಶಾಪಕ್ಕೆ ಗುರಿಯಾಗುತ್ತಾರೆ ಎಂಬ ಪ್ರತೀತಿಯಿದೆ. ಕಾರಣ ಆಹಾರದ ನಿರೀಕ್ಷೆಯಲ್ಲಿ ಇದ್ದ ಪಿತೃಗಳಿಗೆ ಆಹಾರ ಸಿಗದೇ ಹೋದಾಗ ಸಹಜವಾಗಿ ಹಸಿವೆ ಇಂದ ಶಪಿಸುವುದು ಸಹಜ ಅಲ್ಲವೇ? ಹಾಗಾಗಿ ಪಿತೃ ಪಕ್ಷದಲ್ಲಿ ಪಿತೃಗಳಿಗೆ ಪಿಂಡ ಪ್ರದಾನ ಮಾಡುವುದು ಬಹಳ ಮುಖ್ಯ ಎಂದು ಹೇಳಲಾಗುತ್ತೆ.