ಬ್ರಿಟನ್‌ನ ಸಿಂಹಾಸನವನ್ನು ಅಲಂಕರಿಸಿರುವ ಮಹಾರಾಜ ಚಾರ್ಲ್ಸ್-III ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಕಿಂಗ್ ಚಾರ್ಲ್ಸ್‌ರ ಯೌವ್ವನದ ದಿನಗಳು ಬಹು ಚರ್ಚಿತವಾಗಿದ್ದವು. ಅವರ ಪ್ರೇಮ ವ್ಯವಹಾರಗಳು ಪತ್ರಿಕೆಗಳಿಗೆ ಆಹಾರವಾಗಿದ್ದವು. ಅಷ್ಟೇ ಅಲ್ಲ, ಜಗತ್ತಿನಲ್ಲಿ ಅತ್ಯಂತ ಚರ್ಚೆಗೆ ಗ್ರಾಸವಾಗಿದ್ದ ವಿಚ್ಛೇದನಗಳಲ್ಲಿ ಚಾರ್ಲ್ಸ್ ಅವರದ್ದೂ ಒಂದು.
ಬ್ರಿಟಿಷ್ ಇತಿಹಾಸದಲ್ಲಿ ಆಗಸ್ಟ್ 28ನ್ನು ಅನೇಕ ಕಾರಣಗಳಿಗಾಗಿ ನೆನಪಿಸಿಕೊಳ್ಳಲಾಗುತ್ತದೆ. ಇವುಗಳಲ್ಲೊಂದು ಪ್ರಿನ್ಸ್ ಚಾರ್ಲ್ಸ್-III ಅವರ ವಿಚ್ಛೇದನ. ರಾಜಕುಮಾರಿ ಡಯಾನಾ ಅವರೊಂದಿಗಿನ ಸಂಬಂಧವನ್ನು ಚಾರ್ಲ್ಸ್ ಘೋಷಿಸಿಬಿಟ್ಟಿದ್ದರು. ಬ್ರಿಟನ್ ರಾಜಮನೆತನಕ್ಕೆ ಸಂಬಂಧಿಸಿದ ಸಾಕ್ಷ್ಯಚಿತ್ರದಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ಆ ದಿನಗಳಲ್ಲಿ ಪ್ರಿನ್ಸ್ ಚಾರ್ಲ್ಸ್ ಮತ್ತು ರಾಜಕುಮಾರಿ ಡಯಾನಾರ ಪ್ರೇಮಕಥೆ ಕೂಡ ಬ್ರಿಟಿಷ್ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಲ್ಲಿರುತ್ತಿತ್ತು.
ಆದರೆ 1992 ರಲ್ಲಿ ಇಬ್ಬರ ನಡುವೆ ಬಿರುಕು ಶುರುವಾಗಿತ್ತು. 1996 ರಲ್ಲಿ ಚಾರ್ಲ್ಸ್ ಮತ್ತು ಡಯಾನಾ ದೂರವಾಗಲು ನಿರ್ಧರಿಸಿದ್ರು. ಆ ಸಮಯದಲ್ಲಿ ಡಯಾನಾಗೆ 35ರ ಹರೆಯ, ಪ್ರಿನ್ಸ್ ಚಾರ್ಲ್ಸ್‌ಗೆ ಸುಮಾರು 48 ವರ್ಷವಾಗಿತ್ತು. ಬ್ರಿಟನ್‌ನ ರಾಜ ಕುಟುಂಬಕ್ಕೆ ಸಂಬಂಧಿಸಿದ ‘ದಿ ರಾಯಲ್ ಫ್ಯಾಮಿಲಿ ಅಟ್ ವಾರ್’ ಎಂಬ ಸಾಕ್ಷ್ಯಚಿತ್ರದಲ್ಲಿ, ಇಬ್ಬರ ನಡುವಿನ ಸಂಬಂಧವನ್ನು ವಿವರವಾಗಿ ಚಿತ್ರಿಸಲಾಗಿದೆ. ಸಾಕ್ಷ್ಯಚಿತ್ರದಲ್ಲಿ ಹೇಳಿರುವ ಪ್ರಕಾರ ಡಯಾನಾ ಮತ್ತು ಚಾರ್ಲ್ಸ್ ಆಗಸ್ಟ್ 28, 1996 ರಂದು ವಿಚ್ಛೇದನ ಪಡೆದರು.
ವಿಚ್ಛೇದನದ ನಂತರ ಇಬ್ಬರೂ ಕಣ್ಣೀರಿಟ್ಟಿದ್ದರಂತೆ. ಪರಸ್ಪರ ದೂರವಾಗಲು ನಿರ್ಧರಿಸಿ ಡೈವೋರ್ಸ್ ಪಡೆದು ಇವರು ವಿಚ್ಛೇದನದ ಬಳಿಕ ಕಣ್ಣೀರಿಟ್ಟಿದ್ದೇಕೆ ಅನ್ನೋದು ಪ್ರಶ್ನೆ. ಅಸಲಿಗೆ 1996ರ ಹೊತ್ತಿಗೆ ಇವರ ಸಂಬಂಧದಲ್ಲಿ ಸಾಕಷ್ಟು ಸುಧಾರಣೆ ಕಂಡುಬಂದಿತ್ತಂತೆ. ಇಬ್ಬರು ಮಕ್ಕಳು ಸಹ ಇದ್ದರು. 1994 ರಲ್ಲಿ ಪ್ರಿನ್ಸ್ ಚಾರ್ಲ್ಸ್ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಡಯಾನಾ ಸಂಬಂಧದಲ್ಲಿ ನಿಷ್ಠರಾಗಿಲ್ಲ ಎಂದು ಬಹಿರಂಗಪಡಿಸಿದ್ದರು.
ಚಾರ್ಲ್ಸ್ ಅವರ ಈ ಹೇಳಿಕೆ ಆಗ ದೊಡ್ಡ ವಿಷಯವಾಯಿತು. ರಾಣಿ ಎಲಿಜಬೆತ್ ಇಬ್ಬರ ನಡುವಿನ ಸಂಬಂಧವನ್ನು ಉಳಿಸಲು ಸಾಕಷ್ಟು ಪ್ರಯತ್ನಿಸಿದರು. ಆದರೆ ವಿಚ್ಛೇದನವನ್ನು ತಡೆಯಲು ಸಾಧ್ಯವಾಗಲೇ ಇಲ್ಲ. ಇಬ್ಬರೂ ವಿಚ್ಛೇದನ ಪಡೆದಾಗ, ಪ್ರಿನ್ಸ್ ವಿಲಿಯಂಗೆ 14 ವರ್ಷ ಮತ್ತು ಪ್ರಿನ್ಸ್ ಹ್ಯಾರಿಗೆ 11 ವರ್ಷ. ನಂತರ ಡಯಾನಾ ಕಾರು ಅಪಘಾತದಲ್ಲಿ ದುರಂತ ಸಾವಿಗೀಡಾಗಿದ್ದು ಈಗ ಇತಿಹಾಸ.