ಬೆಳಿಗ್ಗೆ ಎದ್ದ ತಕ್ಷಣ ಆಯಾಸ, ಆಲಸ್ಯ ಎನ್ನುವವರು ಅನೇಕ ಮಂದಿ. ಇದಕ್ಕೆ ಅನೇಕ ಕಾರಣಗಳಿವೆ. ದೀರ್ಘ ಕಾಲದ ಅಸ್ವಸ್ಥತೆ, ನಿದ್ರಾಹೀನತೆ, ಕಳಪೆ ಆಹಾರ, ಥೈರಾಯ್ಡ್, ಅನಿಯಮಿತ ದಿನಚರಿಗಳು, ದೇಹದಲ್ಲಿ ಅತಿಯಾದ ಆಮ್ಲ ಇರುವುದು ಮುಖ್ಯ ಕಾರಣ.
ಬಿಡುವಿಲ್ಲದ ಕೆಲಸದಿಂದಾಗಿ ಎಲ್ಲರಿಗೂ ಸುಸ್ತಾಗೋದು ಕಾಮನ್. ಆದ್ರೆ ರಾತ್ರಿ ಸುಖಕರ ನಿದ್ದೆ ಬಂದಿದ್ದರೂ ಕೆಲವೊಬ್ಬರಿಗೆ ಬೆಳಿಗ್ಗೆ ಆಯಾಸ ಕಾಣಿಸಿಕೊಳ್ಳುತ್ತದೆ. ಅಂತವರು ತಮ್ಮ ದಿನಚರಿಯಲ್ಲಿ ಹಾಗೂ ಆಹಾರದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡಲ್ಲಿ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರೆ ಆಯಾಸ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಸಾಕಷ್ಟು ನೀರು ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ. ಬಿಸಿ ನೀರನ್ನು ಬಾಟಲಿಗೆ ಹಾಕಿ ಕೈಕಾಲುಗಳಿಗೆ ಶಾಖ ಕೊಟ್ಟಕೊಳ್ಳಬಹುದು.
ಸುಸ್ತಾದಾಗ ಚಾಕೋಲೇಟ್ ತಿನ್ನಿ. ಚಾಕೋಲೇಟ್ ತಕ್ಷಣ ಆಯಾಸವನ್ನು ಕಡಿಮೆ ಮಾಡುತ್ತದೆ. ಕೋಕೋದಲ್ಲಿ ಆಯಾಸ ಕಡಿಮೆ ಮಾಡುವ ಶಕ್ತಿ ಇದೆ.
ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದು ಹಾಗೂ ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಬೇಗ ಮಲಗಿ ಬೇಗ ಏಳುವುದನ್ನು ರೂಢಿಸಿಕೊಳ್ಳಿ.
ಎದ್ದ ತಕ್ಷಣ ತಣ್ಣೀರಿನಲ್ಲಿ ಸ್ನಾನ ಮಾಡಿ. ಇದು ನಿಮ್ಮನ್ನು ರಿಫ್ರೆಶ್ ಮಾಡುತ್ತದೆ. ಜೊತೆಗೆ ರಕ್ತಸಂಚಾರ ಸುಲಭವಾಗುವಂತೆ ಮಾಡುತ್ತದೆ.
ಮುಂಜಾನೆ ಬೇಗ ಎದ್ದು ಮನೆಯಲ್ಲಿ ವ್ಯಾಯಾಮ ಮಾಡಿ. ಇದರಿಂದ ಆಯಾಸ ಕಡಿಮೆಯಾಗಿ ಹಿತವೆನಿಸುತ್ತದೆ.
ಬೆಳಿಗ್ಗೆ ಬಿಸಿ ಬಿಸಿ ಟೀ ಕುಡಿಯಿರಿ. ತುಳಸಿ ಅಥವಾ ಪುದೀನಾ ಟೀ ಸೇವನೆ ಮಾಡುವುದು ಒಳ್ಳೆಯದು.
ಬೆಳಿಗ್ಗೆ ಉಪಹಾರದ ಜೊತೆ ಹಸಿ ತರಕಾರಿ ಹಾಗೂ ತಾಜಾ ಹಣ್ಣಿನ ರಸವನ್ನು ಕುಡಿಯಿರಿ. ಇದು ಆರೋಗ್ಯಕ್ಕೆ ಒಳ್ಳೆಯದು. ಹಾಗೆ ದೇಹದಲ್ಲಿರುವ ಆಯಾಸವನ್ನು ಕಡಿಮೆ ಮಾಡುತ್ತದೆ.
ತುಂಬಾ ಆಯಾಸ, ನೋವು ಎನ್ನಿಸಿದಲ್ಲಿ ದೇಹಕ್ಕೆ ಮಸಾಜ್ ಮಾಡಿಸಿಕೊಳ್ಳಿ ಅಥವಾ ಮನೆಯಲ್ಲಿ ನೀವೇ ಮಾಡಿಕೊಳ್ಳಿ. ಇದರಿಂದ ರಕ್ತ ಸಂಚಾರ ಸುಲಭವಾಗಿ ಹಿತವೆನಿಸುತ್ತದೆ.
ಹಿಮೋಗ್ಲೋಬಿನ್ ಹಾಗೂ ರಕ್ತಹೀನತೆ ಸಮಸ್ಯೆಗೆ ಮುಕ್ತಿ ನೀಡಲು ಕಬ್ಬಿಣಾಂಶವಿರುವ ಆಹಾರವನ್ನು ಸೇವಿಸಿ.